

ಲಖನೌ: ಉತ್ತರ ಪ್ರದೇಶದ ಹತ್ರಾಸ್ ಕಾಲ್ತುಳಿತದಲ್ಲಿ 121 ಮಂದಿಯ ಸಾವಿಗೆ ಕಾರಣರಾದ ಭೋಲೆ ಬಾಬಾ ಅಲಿಯಾಸ್ ಸೂರಜ್ ಪಾಲ್ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆತನ ವಿರುದ್ಧ ಲೈಂಗಿಕ ಕಿರುಕುಳದಂಥ ಗಂಭೀರ ಪ್ರಕರಣಗಳಿದ್ದರೂ, ತನ್ನ ರಕ್ಷಣೆಗೆ ಖಾಸಗಿ ಮಹಿಳಾ ಬ್ಲಾಕ್ ಕಮಾಂಡೋ ಪಡೆ ನೇಮಿಸಿಕೊಂಡಿರುವುದು ಪೊಲೀಸರ ತನಿಖೆ ವೇಳೆ ಕಂಡುಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಈ ಭೋಲೆ ಬಾಬಾ ಆಶ್ರಮ ಉತ್ತರ ಪ್ರದೇಶದ ಮೊಯಿನ್‌ಪುರಿಯಲ್ಲಿದೆ. ಭಕ್ತರಿಂದ ಕೋಟ್ಯಂತರ ರೂಪಾಯಿ ದೇಣಿಗೆಯಿಂದಲೇ ಅರಮನೆಯಂಹ ಆಶ್ರಮ ಕಟ್ಟಡ ನಿರ್ಮಿಸಿಕೊಂಡು ಅದರಲ್ಲಿ ಬಾಬಾ ವಿಲಾಸಿ ಜೀವನ ನಡೆಸುತ್ತಿದ್ದಾರೆ.
ದೇವಮಾನವ ಭೋಲೆ ಬಾಬಾ ವಿರುದ್ಧ ಉತ್ತರ ಪ್ರದೇಶ, ರಾಜಸ್ಥಾನ ಮತ್ತಿತರ ಕಡೆ ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಅವರಿಗೆ ಜೀವ ಬೆದರಿಕೆ ಇರುವ ಕಾರಣ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಭೋಲೆ ಬಾಬಾ ಭದ್ರತಾ ವಿಭಾಗ ಮಹಿಳಾ ಕಮಾಂಡೋಗಳನ್ನು ಹೊಂದಿದೆ. ಆಶ್ರಮ ಕಟ್ಟಡದ ಕೊನೆಯಲ್ಲಿ ಏಳು ಸುತ್ತಿನ ಕೋಟೆಯಂತಹ ರಕ್ಷಣೆಯಲ್ಲಿ ಬಾಬಾ ತಂಗುವ ಕೋಣೆ ಇದೆ. ಆಯ್ದ ಏಳು ಮಂದಿ ಮಹಿಳೆಯರಿಗೆ ಮಾತ್ರ ಆ ಕೋಣೆಗೆ ಅವಕಾಶವಿದೆ. ರಾತ್ರಿ 8 ಗಂಟೆಯ ನಂತರ ಬಾಬಾ ಯಾರನ್ನೂ ಭೇಟಿಯಾಗುವುದಿಲ್ಲ.
ಇನ್ನು ಭದ್ರತಾ ಸಿಬ್ಬಂದಿಗೆ ಕೋಡ್ ಇರುತ್ತದೆ. ಭದ್ರತಾ ವಿಷಯಗಳನ್ನು ಕೋಡ್ ಆಧಾರದ ಮೇಲೆ ನೋಡಿಕೊಳ್ಳಲಾಗುತ್ತದೆ. ನಾರಾಯಣಿ ಮಹಿಳಾ ಕಮಾಂಡೋ ಸೇನಾ, ಗರುಡ ಯೋಧ ಮತ್ತು ಹರಿವಾಖ್ ತಂಡಗಳ ಭದ್ರತಾ ಸಿಬ್ಬಂದಿ ಬಾಬಾಗೆ 24 ಗಂಟೆಗಳ ಕಾಲ ಕಾವಲು ಕಾಯುತ್ತಿದ್ದಾರೆ. ನಾರಾಯಣ ಸೇನಾ ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಗರುಡ ಯೋಧರು ಕಪ್ಪು ಉಡುಪು ಧರಿಸುತ್ತಾರೆ. ಹರಿ ವಾಹಕ್ ಸದಸ್ಯರು ಕಂದು ಬಣ್ಣದ ಉಡುಪು ಧರಿಸುತ್ತಾರೆ.
ಬಾಬಾನ ಬೆಂಗಾವಲು ಪಡೆಯಲ್ಲಿ ಯಾವಾಗಲೂ 20 ಕಪ್ಪು ಕಮಾಂಡೋಗಳು ಇರುತ್ತಾರೆ. ನಾರಾಯಣ ಸೇನೆಯ 50 ಸದಸ್ಯರು ಮತ್ತು ಹರಿ ವಾಖ್‌ನ 25 ಸದಸ್ಯರು ಸಹ ಇರುತ್ತಾರೆ.