‘ದರ್ಶನ್‌ಗೆ ಪವಿತ್ರಾ ಗೌಡ ಸ್ನೇಹಿತೆ ನಿಜ, ಆದ್ರೆ ಪತ್ನಿಯಲ್ಲ’ ಕಮಿಷನರ್​​ಗೆ ಪತ್ರ ಬರೆದ ವಿಜಯಲಕ್ಷ್ಮೀ

vijayalakshmi darshan
Published on

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ದರ್ಶನ್ ಅವರನ್ನ ಜೈಲಿನಿಂದ ಹೊರಗೆ ಕರೆತರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಮಾಡುತ್ತಿದ್ದಾರೆ. ಹೀಗಿರುವಾಗಲೇ, ನಾನು ದರ್ಶನ್‌ ಅವರ ಏಕೈಕ ಪತ್ನಿ ಎಂದು ಪೊಲೀಸ್ ಕಮಿಷನರ್‌ ದಯಾನಂದ್ ಅವರಿಗೆ ವಿಜಯಲಕ್ಷ್ಮೀ ದರ್ಶನ್ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನ್ನ ಪತಿ ದರ್ಶನ್ ಹಾಗೂ ಕೆಲವರನ್ನು ನಿಮ್ಮ ಇಲಾಖೆ ಬಂಧಿಸಿ ಎರಡು ವಾರ ಕಳೆದಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಹತ್ಯೆ ಕೇಸ್‌ನ ಮಾಸ್ಟರ್‌ ಮೈಂಡ್ ಆಗಿರುವ ಮತ್ತು ಎ-1 ಆರೋಪಿ ಶ್ರೀಮತಿ ಪವಿತ್ರಾ ಗೌಡ ಬಗ್ಗೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸುವಂತೆ ನಾನು ನಿಮ್ಮಲ್ಲಿ ವಿನಂತಿ ಮಾಡುತ್ತೇನೆ. ನನ್ನ ಪತಿ ಶ್ರೀ ದರ್ಶನ್ ಶ್ರೀನಿವಾಸ್ ಅವರಿಗೆ ಪವಿತ್ರಾ ಗೌಡ ಸ್ನೇಹಿತೆ ನಿಜ. ಆದರೆ ಹೆಂಡತಿಯಲ್ಲ ಎಂಬುದನ್ನ ತಾವು ದಯವಿಟ್ಟು ಗಮನಿಸಿ. ನಾನು ದರ್ಶನ್ ಅವರ ಏಕೈಕ ಪತ್ನಿ. ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ನಮ್ಮ ಮದುವೆ ಧರ್ಮಸ್ಥಳದಲ್ಲಿ 19.05.2003 ರಂದು ನಡೆಯಿತು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ತಾವು ತಪ್ಪಾಗಿ ಪವಿತ್ರಾ ಗೌಡ ಅವರನ್ನ ದರ್ಶನ್‌ ಪತ್ನಿ ಎಂದು ಸಂಬೋಧಿಸಿದ್ದೀರಿ. ಆನಂತರ ಕರ್ನಾಟಕದ ಮಾನ್ಯ ಗೃಹ ಸಚಿವರೂ ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ ಮತ್ತು ಪತ್ನಿ ಬಂಧನ ಎಂದೇ ಸುದ್ದಿ ಪ್ರಕಟಿಸಲು ಮುಂದುವರಿಸಿದರು. ನಾನು ಕಾನೂನುಬದ್ಧವಾಗಿ ವಿವಾಹವಾದ ದರ್ಶನ್‌ ಅವರ ಏಕೈಕ ಹೆಂಡತಿ ಮತ್ತು ನಮ್ಮ ಮಗ ವಿನೀಶ್. ತಪ್ಪಾಗಿ ಪ್ರಸ್ತಾಪವಾಗಿರುವ ಪರಿಣಾಮ ಭವಿಷ್ಯದಲ್ಲಿ ಈ ಪ್ರಕರಣದಿಂದ ನನಗೆ ಹಾಗೂ ಮಗ ವಿನೀಶ್‌ಗೆ ಯಾವುದೇ ಗೊಂದಲ ಅಥವಾ ತೊಂದರೆ ಆಗಬಾರದು.

ಶ್ರೀ ಸಂಜಯ್‌ ಸಿಂಗ್ ಎಂಬುವರನ್ನ ಶ್ರೀಮತಿ ಪವಿತ್ರಾ ಗೌಡ ಮದುವೆಯಾಗಿದ್ದರು ಎನ್ನಲಾಗಿದೆ. ಸಂಜಯ್‌ ಸಿಂಗ್ ಮೂಲಕ ಪವಿತ್ರಾ ಗೌಡಗೆ ಮಗಳಿದ್ದಾಳೆ. ಈ ಕುರಿತಾಗಿ ನಿಮ್ಮ ಪೊಲೀಸ್ ಫೈಲ್‌ಗಳಲ್ಲಿ ದಾಖಲೆಗಳು ಹಾಗೂ ಮಾಹಿತಿಗಳನ್ನು ಸರಿಪಡಿಸಲು ನಾನು ಕೋರಿಕೊಳ್ಳುತ್ತೇನೆ ಎಂದು ವಿನಂತಿಸುತ್ತೇನೆ ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net