

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬೊಕ್ಕಸದಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲ. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕಪ್ಪ ಕಾಣಿಕೆ ವಸೂಲಿ ಬಿಡುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮಹತ್ವದ ಯೋಜನೆಗಳು ಸೇರಿ ತುರ್ತು ಅಗತ್ಯದ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಆದರೆ ಕಟ್ಟಡ ಪರವಾನಗಿಗೆ ಕಪ್ಪ ಕಾಣಿಕೆ ವಸೂಲಿ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ ಎಂದು ಟೀಕಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ, ಅನುದಾನ ಸಿಗುತ್ತಿಲ್ಲವೆಂದು ಆಡಳಿತ ಪಕ್ಷದ ಶಾಸಕರೇ ದೂರುತ್ತಿದ್ದಾರೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವ ಕಾರಣ ನನಗೆ ಲಭ್ಯ ಮಾಹಿತಿ ಪ್ರಕಾರ ಜನರ ಮೇಲೆ ಇನ್ನಷ್ಟು ತೆರಿಗೆ ಹೇರಲಿದ್ದಾರೆ. ಸರ್ಕಾರದ ಬಗ್ಗೆ ಟೀಕಿಸಿದರೆ ಎ್ಐಆರ್ ದಾಖಲಿಸಿ ಜೈಲಿಗೆ ಹಾಕುತ್ತಾರೆ ಎಂದು ಆರ್.ಅಶೋಕ್ ದೂರಿದರು.
ಸಂವಿಧಾನಕ್ಕೆ 68 ಬಾರಿ ತಿದ್ದುಪಡಿ ತಂದ ಕಾಂಗ್ರೆಸ್, ಜಾತ್ಯತೀತ ಪದದ ಬಗ್ಗೆ ಮಾತನಾಡುತ್ತಿದೆ. ಆದರೆ ಬಾಬಾ ಸಾಹೇಬರು ಬರೆದ ಸಂವಿಧಾನದಲ್ಲಿ ಜಾತ್ಯತೀತ ಪದವೇ ಇಲ್ಲ. ಕರಡು ಪ್ರತಿಯಲ್ಲಿ ಕಾಂಗ್ರೆಸ್ ನಾಯಕರು ತೋರಿಸಿ, ಸಾಬೀತುಪಡಿಸಲಿ ಎಂದು ಸವಾಲೆಸೆದರು.
ರಾಜಕೀಯ ನಾಯಕರೆಲ್ಲ ಜಾತಿ, ವರ್ಗಗಳಿಂದ ಗುರುತಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಒಂದು ಕಡೆ ಜಾತಿ ಸಮೀಕ್ಷೆ ಬೇಕೆಂದು ಹೇಳುತ್ತಾರೆ. ನಂತರ ಜಾತ್ಯತೀತ ಎನ್ನುತ್ತಾರೆ. ಬಾಬಾ ಸಾಹೇಬರ ಮೂಲ ಆಶಯಗಳನ್ನೇ ಬುಡಮೇಲು ಮಾಡಿದ ಕಾಂಗ್ರೆಸ್, ಸಂವಿಧಾನಕ್ಕೆ ಒಟ್ಟಾರೆಯಾಗಿ 68 ತಿದ್ದುಪಡಿಗಳನ್ನು ಮಾಡಿದೆ ಎಂದರು.
ತುರ್ತು ಪರಿಸ್ಥಿತಿ ತರಬೇಕೆಂದು ಯಾವ ಸಂವಿಧಾನದಲ್ಲಿ ಎಲ್ಲಿ ಬರೆದಿದ್ದಾರೆ ಎಂದು ಕಾಂಗ್ರೆಸ್ ಹೇಳಬೇಕು. ಕಾಂಗ್ರೆಸ್‌ನವರು ಕುತಂತ್ರ ಮಾಡಿ ಈ ಎರಡೂ ಪದಗಳನ್ನು ಸೇರಿಸಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಆರ್.ಅಶೋಕ್ ಅಭಿಪ್ರಾಯಪಟ್ಟರು.
ಸರ್ಕಾರದ ವಿರುದ್ಧ ಬಿಜೆಪಿ ಯಶಸ್ವಿಯಾಗಿ ಹೋರಾಟಗಳನ್ನು ಮಾಡಿದೆ. ಆದರೆ ಜಿಲ್ಲಾಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿದರೆ ಹೋರಾಟಗಳನ್ನು ಇನ್ನಷ್ಟು ವೇಗವಾಗಿ ಮಾಡಬಹುದು ಎಂಬ ಅಭಿಪ್ರಾಯ ಬಂದಿದೆ. ಪಕ್ಷದ ಹಿರಿಯ ನಾಯಕರು ಸೇರಿ ಈ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಜಿಲ್ಲಾಮಟ್ಟದ ಸಮಸ್ಯೆ ಬಗೆಹರಿಸಲು ಸಮಿತಿ ರಚಿಸಲಾಗಿದೆ. ಬಿಜೆಪಿಯಲ್ಲಿ ಎಲ್ಲರೂ ಒಂದಾಗಿ ಹೋಗಲೇಬೇಕಿದೆ. ಆಗಲೇ ಪಕ್ಷಕ್ಕೆ ಕಳೆ ಬರಲಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಆರ್.ಅಶೋಕ್ ಹೇಳಿದರು.