

ನ್ಯೂಯಾರ್ಕ್: ವಿದ್ಯುತ್ ಬಲ್ಬ್ ಸಂಶೋಧನೆ ಮಾಡಿದ್ದು ಥಾಮಸ್ ಆಲ್ವ ಎಡಿಸನ್ ಎಂದು ನಾವೆಲ್ಲ ಓದುತ್ತ ಬೆಳೆದಿದ್ದೇವೆ. ಆದರೆ, ನಿಜ ಸಂಗತಿ ಅದಲ್ಲ, ಎಡಿಸನ್ ವಿದ್ಯುತ್ ಬಲ್ಬ್ ಕಂಡು ಹಿಡಿದಿಲ್ಲ....!
ಇತಿಹಾಸಕ್ಕೆ ಹೊಸ ವ್ಯಾಖ್ಯಾನ ಅಥವಾ ಹೊಸ ಇತಿಹಾಸವನ್ನೇ ಬರೆಯಲು ಹೊರಟಿದ್ದು ಅಮೆರಿಕದ ಡೆಮೊಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜಾಯ್ ಬಿಡೆನ್.
ವಿಸ್ಕೋನ್ಸಿನ್ ರಾಜ್ಯದ ಕೆನೊಶಾದಲ್ಲಿ ಪೊಲೀಸರಿಂದ ಗುಂಡಿನ ದಾಳಿಗೆ ಒಳಗಾದ ಕಪ್ಪು ವರ್ಣೀಯ ಜಾಕೋಬ್ ಬ್ಲೇಕ್ ಹಾಗೂ ಆತನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಈ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಆಫ್ರಿಕನ್ ಅಮೆರಿಕನ್ ಮತಗಳನ್ನು ಸೆಳೆಯಲು ಬಿಡೆನ್ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
ವಿದ್ಯುತ್ ಬಲ್ಬ್ಅನ್ನು ಕಂಡು ಹಿಡಿದದ್ದು ಕಪ್ಪು ವರ್ಣೀಯನೇ ಹೊರತು ಶ್ವೇತ ವರ್ಣೀಯ ಎಡಿಸನ್ ಅಲ್ಲ. ಇತಿಹಾಸದ ತರಗತಿಗಳಲ್ಲಿ ನಾವು ಇತಿಹಾಸವನ್ನೇ ಬೋಧಿಸುತ್ತಿಲ್ಲ ಎಂದು ಬಿಡೆನ್ ಹೇಳಿದ್ದಾರೆ.
ಇಷ್ಟಕ್ಕೂ ಬಿಡೆನ್ ಮಾತು ಹೇಳಲು ಕಾರಣವೇನು? ಯಾರೂ ಈ ಕಪ್ಪು ವರ್ಣೀಯ ಎಂದು ನೋಡೋದಾದರೆ, ಆತನ ಹೆಸರು ಲೂಯಿಸ್ ಲ್ಯಾಟಿಮರ್. ಈತ ಟೆಲಿಫೋನ್ ಕಂಡು ಹಿಡಿಯುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದ. ವಿದ್ಯುತ್ ಬಲ್ಬ್ ಕಂಡು ಹಿಡಿದದ್ದು ಥಾಮಸ್ ಆಲ್ವ ಎಡಿಸನ್. ಆದರೆ, ಬಲ್ಬ್ ಬಹುಕಾಲ ಉರಿಯುವಂತಾಗಲು ಫಿಲಾಮೆಂಟ್ ಸಂಶೋಧಿಸಿದ್ದು ಲ್ಯಾಟಿಮರ್ ಎಂದು ಇತಿಹಾಸಕಾರರು ಹೇಳಿದ್ದಾರೆ. ಈಗ ಜನಾಂಗೀಯ ದ್ವೇಷ ಬಿತ್ತಲು ಲ್ಯಾಟಿಮರ್ನನ್ನು ಉರುವಲು ಮಾಡಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ವ್ಯಾಖ್ಯಾನಿಸಿದ್ದಾರೆ.