ನಾವು ಗೆಲ್ಲಲೆಂದೇ ಬಂದವರು… ನಮಗೆ ಸೋಲು ಕ್ಷಣಿಕ: ಬಿ.ಎಲ್.ಸಂತೋಷ್​

Santhosh BL
Published on

ಬೆಂಗಳೂರು: ತತ್ವ-ಸಿದ್ಧಾಂತದ ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಪಾಲಿಗೆ ‘ಮೆಂಟರ್’, ಆಡಳಿತಕ್ಕೆ ಮಾರ್ಗದರ್ಶನದ ಜವಾಬ್ದಾರಿ ಹೊತ್ತವರೇ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವೆಂಬ ಅ‘ಸಂತೋಷ’ ಬಿಜೆಪಿಯಲ್ಲಿ ಮಡುಗಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಸ್ಪೋಟಿಸುವ ಸಾಧ್ಯತೆಗಳಿವೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಜವಾಬ್ದಾರಿ ನಿರ್ವಹಿಸುವ ನೆಪವೊಡ್ಡಿ, ಪ್ರತಿಯೊಂದರಲ್ಲಿ ‘ಶಕ್ತಿ’ಪ್ರದರ್ಶನಕ್ಕೆ ಮುಂದಾದದ್ದು ಚುನಾವಣೆಯಲ್ಲಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಲಸ ಬಿಟ್ಟು ಉಳಿದೆಲ್ಲವನ್ನೂ ನಿಭಾಯಿಸುತ್ತಿದ್ದು, ಸಂಘಟನಾ ಬಲ ಇನ್ನಷ್ಟು ಕುಸಿಯುವ ಮುನ್ನ ಸಂಘದ ಸೇವೆಗೆ ಮರಳಿ ಕರೆಯಿಸಿಕೊಳ್ಳಬೇಕು ಎಂದು ಕೇಳಿಬರುತ್ತಿದ್ದ ಸಣ್ಣಧ್ವನಿಗೆ ಚುನಾವಣೆ ಸೋಲು ಬಲ ತುಂಬಿದೆ ಎಂದು ಮೂಲಗಳು ತಿಳಿಸಿವೆ.

ಸೋಲು ನಮಗೆ ಕ್ಷಣಿಕೆ!

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುತ್ತಿದ್ದಂತೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಫೇಸ್​ಬುಕ್​ನಲ್ಲಿ ಪೋಸ್ಟ್ ಒಂದು ಮಾಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಲಿಯುತ್ತೇವೆ ಸೋಲಿನಿಂದ, ಹಿನ್ನಡೆಗಳಿಂದ, ತಪ್ಪುಗಳಿಂದ. ಉತ್ತರಿಸುತ್ತೇವೆ ಟೀಕೆಗಳಿಗೆ, ಕುಹಕಗಳಿಗೆ, ಒಡಕು ಮಾತುಗಳಿಗೆ ನಮ್ಮ ಗತಿಶೀಲತೆಯಿಂದ. ನಾವು ಇರಲಿಕ್ಕೇ ಬಂದವರು… ಗೆಲ್ಲಲಿಕ್ಕೇ ಬಂದವರು… ನಮಗೆ ಸೋಲು ಕ್ಷಣಿಕ… ಮುನ್ನಡೆ ಸತತ… ಎಂದು ಬರೆದುಕೊಂಡಿದ್ದಾರೆ.

ಮುನ್ನಡೆ ಸಾಧಿಸಿ ತೋರಿಸುತ್ತೇವೆ!

ಅಲ್ಲದೆ ಇನ್ನು ಒಂದು ವರ್ಷದ ಒಳಗಾಗಿ 31000ಕ್ಕೆ ಮತ್ತೆ 10000 ಸೇರಿಸಿ, 41000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ಬಿ.ಎಲ್.ಸಂತೋಷ್ ಕಾಂಗ್ರೆಸ್​ಗೆ ಸವಾಲು ಎಸೆದಿದ್ದಾರೆ. ವಿಜಯದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮೂಲಕ ಬಿ.ಎಲ್.ಸಂತೋಷ್ ಅವರಿಗೆ ಟಕ್ಕರ್ ಕೊಡುವ ಕೆಲಸ ಮಾಡಿತ್ತು. ಬಿ.ಎಲ್.ಸಂತೋಷ್ ಅವರೇ, ಸೌಖ್ಯವೇ, ಸಂತೋಷವೇ?! ಅಂದ ಹಾಗೆ ತಾವು ಹೇಳಿದ 31,000 ಬೂತ್‌ಗಳು ಯಾವವು? STD ಬೂತ್‌ಗಳಾ? ಎಂದು ಲೇವಡಿ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net