

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದನಿ ಎತ್ತಿದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಮುಂದಿನ 10 ದಿನಗಳೊಳಗೆ ನೋಟಿಸ್‌ಗೆ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಲಾಗಿದೆ. ಇದೇ ವೇಳೆ ಬಿ.ಕೆ. ಹರಿಪ್ರಸಾದ್ ಬುಧವಾರ ಆಪ್ತರೊಂದಿಗೆ ಸಭೆ ನಡೆಸಿ ತಮ್ಮ ಅಭಿಪ್ರಾಯ ನೀಡಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾವೇಶದ ಭಾಗವಾಗಿ ಶನಿವಾರ ಅರಮನೆ ಮೈದಾನದಲ್ಲಿ ನಡೆದ ಚಿಂತನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ಹರಿಪ್ರಸಾದ್, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರು.
‘ಹಿಂದಿನ ಯಾವ ಮುಖ್ಯಮಂತ್ರಿಗಳು ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗೋದಿಲ್ಲ. ನನ್ನನ್ನ ಮಂತ್ರಿ ಮಾಡದೆ ಇರುವುದಕ್ಕೆ ಸಿಎಂಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಆಕ್ರೋಶ ಹೊರಹಾಕಿದ್ದರು.
ಬಳಿಕ ಸಿದ್ದರಾಮಯ್ಯ ಬಣದವರು ಹೈಕಮಾಂಡ್‌ಗೆ ದೂರು ನೀಡಿದ್ದರು. ಸರ್ಕಾರದ ಚಟುವಟಿಕೆಗೆ ಇಂತಹ ಬೆಳವಣಿಗೆ ಅಡ್ಡಿಯಾಗಲಿದೆ. ಕೂಡಲೇ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ಇಬ್ಬರು ನಾಯಕರು ಸೋಮವಾರ ಹರಿಪ್ರಸಾದ್‌ಗೆ ದೂರವಾಣಿ ಕರೆ ಮಾಡಿದ್ದರು. ಆದರೆ ಹರಿಪ್ರಸಾದ್ ಸ್ಪಂದಿಸಿರಲಿಲ್ಲ.
ಬಳಿಕ ದೆಹಲಿಯಲ್ಲಿ ಸಭೆ ಸೇರಿದ್ದ ಪ್ರಮುಖರು, ಹರಿಪ್ರಸಾದ್‌ಗೆ ನೋಟಿಸ್ ನೀಡಿ ಬಾಯಿ ಮುಚ್ಚಿಸಲು ತೀರ್ಮಾನಿಸಿದ್ದರು.