

ಮಡಿಕೇರಿ: ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆಯ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಕಾರ್ಯಕ್ರಮದಲ್ಲಿ ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿರವರು ನೀಡಿರುವ "ಹಿಂದೂ" ಪದದ ವ್ಯಾಖ್ಯಾನದ ಬಗ್ಗೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳು ಖಂಡನೀಯವೆಂದು ವೇದಿಕೆಯ ಜಿಲ್ಲಾ ಸಂಚಾಲಕ ರಫೀಕ್ ಸುಂಟಿಕೊಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂ ಎಂಬ ಶಬ್ಧದ ಬಗ್ಗೆ ಸತೀಶ ಜಾರಕಿಹೊಳಿ ಅವರು ಗ್ರಂಥಗಳ ಆಧಾರವನ್ನು ನೀಡಿದ್ದಾರೆ. ಅವರು ಎಲ್ಲಿಯೂ ಧರ್ಮದ ವಿಚಾರ ಮಾತನಾಡಿಲ್ಲ. ಈ ಬಗ್ಗೆ ಚರ್ಚೆ ನಡೆಯಲಿ ಎಂಬ ಸವಾಲನ್ನು ಹಾಕಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ತಪ್ಪಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿಯೂ ತಮ್ಮ ಬದ್ಧತೆಯನ್ನು ಸ್ಪ?್ಟಪಡಿಸಿದ್ದಾರೆ. ಆದರೆ ಇವರ ಪಂಥಾಹ್ವಾನವನ್ನು ಸ್ವೀಕರಿಸಲು ಬೌದ್ಧಿಕವಾಗಿ ದುರ್ಬಲರಾಗಿರುವ ಬಿಜೆಪಿಯ ಹಿರಿ ಕಿರಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ವಿವೇಕ ರಹಿತ ಹೇಳಿಕೆಗಳಿಂದ ಅವರ ಬೌದ್ಧಿಕ ದಾರಿದ್ರವನ್ನು ಅವರೇ ಪದರ್ಶಿಸುತ್ತಿದ್ದಾರೆ. ಇಪತ್ತೊಂದನೇ ಶತಮಾನದ ಆಧುನಿಕ ದೇಶದಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆಗಳನ್ನು ಕೊಂದು, ಮಧ್ಯಕಾಲೀನ ಯುಗಕ್ಕೆ ಕೊಂಡೊಯ್ಯುವ ಅವರ ಹುನ್ನಾರಗಳು ಬೆತ್ತಲಾಗುತ್ತಿವೆ. ವಿದ್ವಾಂಸರ ಮೂಲಕ ಸೂಕ್ತ ಉತ್ತರ ನೀಡಬಹುದಿತ್ತು ಅಥವಾ ಹಿಂದೂ ಎಂಬ ಪದದ ವ್ಯಾಖ್ಯಾನ ಮಾಡಬಹುದಿತ್ತು. ಬದಲಾಗಿ ಇದನ್ನೇ ತಮಗೆ ಬೇಕಾದಂತೆ ತಿರುಚಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ರಫೀಕ್ ಆರೋಪಿಸಿದ್ದಾರೆ.