

ಪಟನಾ: ಬಿಹಾರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿಯ ಹಿರಿಯ ಶಾಸಕ ನಂದ ಕಿಶೋರ್ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾದವ್ ಅವರು ಪಟನಾ ಸಾಹಿಬ್ನ ಶಾಸಕರು.
‘ಅವರು ಏಳನೇ ಬಾರಿ ಪಟನಾ ಸಾಹಿಬ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದಿನ ಸರ್ಕಾರಗಳಲ್ಲಿ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಕಳೆದ ಅವಧಿಯಲ್ಲಿ ಅವರು ರಸ್ತೆ ನಿರ್ಮಾಣ ಇಲಾಖೆಯ ಸಚಿವರಾಗಿದ್ದರು. ಜೆಡಿಯು ಮತ್ತು ಬಿಜೆಪಿ ಮೈತ್ರಿಯ ಒಪ್ಪಂದ ಪ್ರಕಾರ ಕಳೆದ ಮೂರು ಅವಧಿಗೆ ಸ್ಪೀಕರ್ ಸ್ಥಾನ ಜೆಡಿಯು ಬಳಿ ಇತ್ತು. ಈ ಬಾರಿ ಅದು ಬಿಜೆಪಿ ಕೈ ಸೇರಿದೆ. ಕಳೆದ ಅವಧಿಯಲ್ಲಿ ಜೆಡಿಯುನ ವಿಜಯ್ ಕುಮಾರ್ ಚೌಧರಿ ಸ್ಪೀಕರ್ ಆಗಿದ್ದರು. ಈ ಬಾರಿ ಅವರು ಸಚಿವರಾಗಿ ಸಂಪುಟ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ಯಾರು ಈ ತಾರಕಿಶೋರ್ ಪ್ರಸಾದ್ ?
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಕಂಡರೆ, ಜೆಡಿಯು ಬಲ 43ಕ್ಕೆ ಕುಸಿದಿದೆ. ಹೀಗಾಗಿ ಈ ಬದಲಾವಣೆ ಆಗಿದೆ. ಯಾದವ್ ಅವರು ನಿತೀಶ್ ಎನ್ಡಿಎ ಮೈತ್ರಿ ಕಡಿದುಕೊಂಡ ಅವಧಿಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ವಿಪಕ್ಷ ಸ್ಥಾನವನ್ನು ನಿರ್ವಹಿಸಿದ್ದರು. ಬಿಹಾರ ಬಿಜೆಪಿಯ ಅಧ್ಯಕ್ಷರಾಗಿ ಎರಡು ಬಾರಿ ಹೊಣೆಗಾರಿಕೆ ನಿಭಾಯಿಸಿದ್ದಾರೆ. ಅವರು ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರವೀಣ್ ಸಿಂಗ್ ಅವರನ್ನು 18,000ಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲಿಸಿದ್ದರು. (ಏಜೆನ್ಸೀಸ್)