ಎಸ್‌ಐಟಿ ಆದೇಶಕ್ಕೆ ಬಿಜೆಪಿ ಆರಂಭಿಕ ಮೌನ: ಸಿಎಂ ವ್ಯಂಗ್ಯ | Dharmasthala case

CM Siddaramaiah
Published on

ಬೆಂಗಳೂರು: ಧರ್ಮಸ್ಥಳ ಗ್ರಾಮದ ಅಸಹಜ ಸಾವು, ಶವ ಹೂತ ಪ್ರಕರಣಗಳ ದೂರಿನ ಬಗ್ಗೆ ಶೋಧ ಶುರು ಮಾಡಿದ ಎಸ್‌ಐಟಿ, 15 ಗುಂಡಿಗಳನ್ನು ಅಗೆದ ನಂತರ ಬಿಜೆಪಿ ಬಾಯಿ ತೆರೆಯಿತು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ವಿಧಾನಸಭೆಯಲ್ಲಿ ಕಾಲ್ತುಳಿತ ದುರಂತದ ಬಗ್ಗೆ ನಡೆದ ಚರ್ಚೆಗೆ ಉತ್ತರಿಸುತ್ತಿದ್ದ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಬಿಜೆಪಿಯವರು ಈಗ ಧರ್ಮಸ್ಥಳ ವಿಚಾರದಲ್ಲಿ ಚಳವಳಿಗೆ ಇಳಿದಿದ್ದಾರಲ್ಲ ಅದೇ ರೀತಿ ಆರ್‌ಸಿಬಿ ವಿಜಯೋತ್ಸವಕ್ಕೆ ಅನುಮತಿ ಕೊಡದಿದ್ದರೆ ಪ್ರತಿಭಟನೆಗೆ ಇಳಿಯುತ್ತಿದ್ದರು ಎಂದರು.

ಎಸ್‌ಐಟಿಯನ್ನು ಧರ್ಮಸ್ಥಳ ಕ್ಷೇತ್ರದವರು ಸ್ವಾಗತಿಸಿದ್ದಾರೆ. ಒಂದು ಗುಂಡಿಯಲ್ಲಿ ಅಸ್ಥಿಪಂಜರ, ಮತ್ತೊಂದರಲ್ಲಿ ಮೂಳೆಗಳು ದೊರೆತಿದ್ದು, 15 ದಿನಗಳಲ್ಲಿ ಏನೂ ಸಿಕ್ಕಿಲ್ಲವೆಂದು ಗೊತ್ತಾದ ಮೇಲೆ ಬಿಜೆಪಿಯವರ ಹೇಳಿಕೆ, ಪ್ರತಿಭಟನೆ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಛೇಡಿಸಿದರು.

ಈ ಮಾತನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅಲ್ಲಗಳೆದು, ಎಸ್‌ಐಟಿ ರಚನೆಗೆ ಸರ್ಕಾರ ನಿರ್ಧರಿಸಿದ ದಿನವೇ ಸ್ವಾಗತಿಸಿದ್ದೇವೆ ಎಂದಾಗ ಉಳಿದ ಸದಸ್ಯರು ಧ್ವನಿಗೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net