

ಬೆಂಗಳೂರು: ರಾಜ್ಯ ಬಿಜೆಪಿ ಸಂಘಟನೆಗೆ ಬಲ ತುಂಬಿ, ಪ್ರಮುಖರನ್ನು ಈ ಚಟುವಟಿಕೆಗಳಿಗೆ ಜೋಡಿಸಲು ಸರಣಿ ಸಭೆಗಳು ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ (27)ದಿಂದ ಮೂರು ದಿನಗಳ ಕಾಲ ನಡೆಯಲಿವೆ.
ಇದಕ್ಕಾಗಿ ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಮೋಹನ್‌ದಾಸ್ ಅಗರ್ವಾಲ್ ಸೋಮವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ಮುಖಂಡರು ಪಾಲ್ಗೊಳ್ಳುವರು.
ಮಂಗಳವಾರ ಮೊದಲ ಅವಧಿಯಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳು ನಂತರ ಪರಿಶಿಷ್ಟ ಜಾತಿ ಪ್ರಮುಖರ ಎರಡು ಸಭೆಗಳು ನಡೆದರೆ, ಮಧ್ಯಾಹ್ನದ ಅವಧಿಯಲ್ಲಿ ಮಹಿಳಾ ಪ್ರಮುಖರ ಸಭೆ ನಡೆಯಲಿದೆ.
ಬುಧವಾರ ಬೆಳಗಿನ ಅವಧಿಯಲ್ಲಿ ಪರಿಶಿಷ್ಟ ಪಂಗಡ ಪ್ರಮುಖರು, ಮಧ್ಯಾಹ್ನ ಯುವ ಪ್ರಮುಖರು ಸಭೆಗಳು ನಡೆಯಲಿವೆ. ಸಂಘಟನೆ ಬಲವರ್ಧನೆ ರಾಜ್ಯ ಸರ್ಕಾರದ ವೈಲ್ಯಗಳ ವಿರುದ್ಧ ಮಂಡಲ ಹಂತಕ್ಕೂ ಹೋರಾಟ ವಿಸ್ತರಣೆ ಈ ಸಭೆಗಳ ಪ್ರಧಾನ ಕಾರ್ಯಸೂಚಿಯಾಗಿದೆ.
ಗುರುವಾರ ಬೆಳಗ್ಗೆ 11ರ ಸಭೆಯು ಮಹತ್ವದ ಅಜೆಂಡಾಗಳನ್ನು ಹೊಂದಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ 11 ವರ್ಷಗಳು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವುದು. ಆಪರೇಷನ್ ಸಿಂಧೂರ ಯಶಸ್ಸಿನ ಬಗ್ಗೆ ಕಾರ್ಯಚಟುವಟಿಕೆ ಸೇರಿವೆ.
ಮಧ್ಯಾಹ್ನ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ನಿಗದಿಯಾಗಿದೆ. ಆಪರೇಷನ್ ಸಿಂಧೂರ ಹಾಗೂ ಎನ್‌ಡಿಎ ಸರ್ಕಾರಕ್ಕೆ ಒಂದು ವರ್ಷ ಕಾರ್ಯಕ್ರಮದ ರೂಪರೇಷೆ, ಜವಾಬ್ದಾರಿ ಹಂಚಿಕೆ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.