

ಬೆಂಗಳೂರು: ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಯೇ ಬಿಜೆಪಿಗೆ ಮುಖ್ಯ. ಸಾಮರಸ್ಯ ಕಾರ್ಯಕ್ರಮಗಳ ಮೂಲಕ ಜಾತಿ ವಿಷ ಬೀಜ ಕಿತ್ತೊಗೆಯಲು ಪ್ರಯತ್ನಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಸಂವಿಧಾನ ಸಮ್ಮಾನ ಹಾಗೂ ಭೀಮಶಕ್ತಿ ಸಂಗಮ ಚಟುವಟಿಕೆಗಳು ಎಲ್ಲ ಸಮುದಾಯಗಳು ಅದರಲ್ಲೂ ದಮನಿತರಿಗೆ ಬಿಜೆಪಿ ಕಾಳಜಿ ಅರ್ಥ ಮಾಡಿಸಿಕೊಟ್ಟಿವೆ.
ಸಂವಿಧಾನ ಬದಲಾವಣೆ ಬಗ್ಗೆ ಪುಕಾರೆಬ್ಬಿಸಿ, ತಾವು ಮಾತ್ರ ಸಂವಿಧಾನ ರಕ್ಷಕರು ಎನ್ನುವಂತೆ ಬಿಂಬಿಸಿಕೊಳ್ಳುತ್ತಿರುವವರ ನಿಜಬಣ್ಣವೂ ಗೊತ್ತಾಗಿದೆ. ಸಂವಿಧಾನಕ್ಕೆ ಎಷ್ಟು ತಿದ್ದುಪಡಿಗಳಾಗಿವೆ, ಈ ಪೈಕಿ ಕಾಂಗ್ರೆಸ್, ಬಿಜೆಪಿ ಸೇರಿ ಕಾಂಗ್ರೆಸ್ಸೇತರ ಆಡಳಿತದ ಅವಧಿಯಲ್ಲಿ ಆಗಿದ್ದೆಷ್ಟು ? ಎಂಬ ವಿವರ ನೀಡಲಾಗಿದೆ.
ಕಾಂಗ್ರೆಸ್ ಪಕ್ಷ ಸ್ವಾರ್ಥ, ಅಧಿಕಾರದ ಲಾಲಸೆಗಾಗಿ ಅನೇಕ ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು, ನಿಜವಾಗಿಯೂ ಸಂವಿಧಾನ ಬದಲಾವಣೆ ಮಾಡಿದವರು ಯಾರು ? ಎಂದು ಜಾಗೃತಿ ಅಭಿಯಾನ ಮೂಲಕ ತಿಳಿಸಿಕೊಟ್ಟಿದ್ದೇವೆ ಎಂದು ಸಿ.ಟಿ.ರವಿ. ಹೇಳಿದರು.
ಮುಡಾದಲ್ಲಿ ಬಹು ಕೋಟಿ ರೂ. ಮೊತ್ತದ ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿವೆ ಎಂಬ ಕಾರಣಕ್ಕೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಇದರ ಭಾಗವಾಗಿ ನೋಟಿಸ್ ನೀಡಿದ್ದೂ ಸಹಜ ಪ್ರಕ್ರಿಯೆಯಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಪತ್ನಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ನೋಟಿಸ್ ನೀಡಿರುವುದು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟಿದೆ. ಆದರೆ ನಿವೇಶನಗಳ ಹಂಚಿಕೆ ಬಗೆಗಿನ ಜಿಜ್ಞಾಸೆ ಬಗೆಹರಿಯಬೇಕಾಗಿದೆ ಎಂದರು.
ಸಿಎಂ ಪತ್ನಿ ಆಗದೇ ಇದ್ದಿದ್ದರೆ 30 ವರ್ಷಗಳಷ್ಟು ಹಿಂದೆ ಅಭಿವೃದ್ಧಿ ಹೊಂದಿದ ವಿಜಯನಗರ ಬಡಾವಣೆ ನಿವೇಶನ ಸಿಗುತ್ತಿತ್ತೆ ? ಅದರಲ್ಲೂ 14 ಸೈಟ್‌ಗಳನ್ನು ಕೊಡಲು ಸಾಧ್ಯವಿತ್ತೆ ? ಎನ್ನುವುದು ಮೂಲಭೂತ ಪ್ರಶ್ನೆಗಳಾಗಿವೆ ಎಂದು ಹೇಳಿದರು.
ಮುಡಾದಲ್ಲಿ ಅಕ್ರಮ ನಡೆದಿದೆ ಎಂದು ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಂಡಿವೆ. ಯಾರ ಕಾಲಘಟ್ಟದಲ್ಲಿ ಯಾರು ಲಾಭ ಪಡೆದಿದ್ದಾರೆ ಎನ್ನುವುದು ತನಿಖೆಯಿಂದ ಸಾಬೀತಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗದಿದ್ದರೆ ಕಾನೂನು, ಸಂವಿಧಾನಕ್ಕೆ ಬೆಲೆಯಿಲ್ಲದಂತಾಗುತ್ತದೆ ಎಂದು ಸಿ.ಟಿ.ರವಿ ಪ್ರತಿಪಾದಿಸಿದರು.