ಅಭಿವೃದ್ಧಿ ಕೆಲಸವೇ ಬಿಜೆಪಿ ಗ್ಯಾರಂಟಿ ಕಾರ್ಡ್

JCM
ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಜೆ.ಸಿ.ಮಾಧುಸ್ವಾಮಿ ಅವರ ಪತ್ನಿ ತ್ರಿವೇಣಿ ಮಾಧುಸ್ವಾಮಿ ಮತಯಾಚನೆ ಮಾಡಿದರು. ಗ್ರಾಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಉಮೇಶ್, ಕುಮಾರಯ್ಯ, ಗ್ರಾಪಂ ಮಾಜಿ ಸದಸ್ಯ ಬಸವರಾಜು, ಸಿದ್ದರಾಮೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ನಟರಾಜು, ಬಜರಂಗದಳದ ಅಧ್ಯಕ್ಷ ಮೋಹನ್ ಉಪಸ್ಥಿತರಿದ್ದರು
Published on

ಹುಳಿಯಾರು: ಕ್ಷೇತ್ರದಲ್ಲಿ 5 ವರ್ಷ ಜೆ. ಸಿ. ಮಾಧುಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ಹಾಕಿ, ಇದೇ ಬಿಜೆಪಿ ಅಭ್ಯರ್ಥಿಯ ಗ್ಯಾರಂಟಿ ಕಾರ್ಡ್ ಎಂದು ಸಚಿವ ಮಾಧುಸ್ವಾಮಿ ಅವರ ಪತ್ನಿ ತ್ರಿವೇಣಿ ಮಾಧುಸ್ವಾಮಿ ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದರು.


ಜಲಜೀವನ್ ಮಿಷನ್ ಯೋಜನೆಯಡಿ 117 ಕೋಟಿ ರೂ. ವೆಚ್ಚದಲ್ಲಿ ಬೋರನಕಣಿವೆ ಜಲಾಶಯದಿಂದ 5 ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು, ತಾಲೂಕಿನಲ್ಲಿ 5 ಹೊಸ ವಿದ್ಯುತ್ ಉಪಸ್ಥಾವರಗಳ ಸ್ಥಾಪನೆ, ಕೆಎಸ್‌ಆರ್‌ಟಿಸಿ ಘಟಕ, ಮಿನಿ ವಿಧಾನಸೌಧ, ಪೊಲೀಸ್ ಠಾಣೆ, ಪ್ರವಾಸಿ ಮಂದಿರ, ಅರಣ್ಯ ಇಲಾಖೆಯ ವಸತಿ ಗೃಹಗಳು, ಸಾಮಾನ್ಯ ವರ್ಗದ 2000 ಮಂದಿಗೆ ವಸತಿ ಭಾಗ್ಯ… ಹೀಗೆ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಮಾಡಿದ್ದು ಮತದಾರರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸಲು ಜೆ.ಸಿ.ಮಾಧುಸ್ವಾಮಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.


ಬಿಜೆಪಿಯತ್ತ ಯುವಸಮೂಹ ಒಲವು: ಮೋದಿ ಅವರ ಆಡಳಿತ ಹಾಗೂ ಮಾಧುಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಯುವಸಮೂಹ ಬಿಜೆಪಿಯತ್ತ ಒಲವು ತೋರುತ್ತಿದೆ ಎಂದು ಸಚಿವ ಮಾಧುಸ್ವಾಮಿ ಅವರ ಪುತ್ರ ಅಭಿಜ್ಞ ಮಾಧುಸ್ವಾಮಿ ಹೇಳಿದರು. ಕಂದಿಕೆರೆಯಲ್ಲಿ ತಂದೆ ಪರ ಮತಯಾಚನೆ ಮಾಡಿ, ಅನೇಕ ಯುವಕರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದರು. ಹಿಂದೆಂದೂ ಆಗದಷ್ಟು ಅಭಿವೃದ್ಧಿ ಈ ಅವಧಿಯಲ್ಲಿ ಆಗಿವೆ. ಆಗಬೇಕಾಗಿರುವುದು ಬಹಳಷ್ಟಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತೊಂದು ಅವಕಾಶವನ್ನು ಮಾಧುಸ್ವಾಮಿ ಅವರಿಗೆ ನೀಡಿ ಎಂದು ಮನವಿ ಮಾಡಿದರು.

ಜಾಗೃತರಾಗಿದ್ದಾರೆ ಮತದಾರರು: ಒಂದು ಕಾಲದಲ್ಲಿ ಹಣ, ಹೆಂಡದ ಬಲದಿಂದ ಜನರಲ್ಲಿ ಜಾತಿಯ ವಿಷ ಬಿತ್ತಿ ಚುನಾವಣೆಯಲ್ಲಿ ಗೆಲ್ಲುವ ಕಾಲವಿತ್ತು. ಆದರೆ, ಮತದಾರರು ಜಾಗೃತರಾಗಿದ್ದಾರೆ. ಅಭಿವೃದ್ಧಿ ನೋಡಿ ಮತ ಹಾಕುವ ಕಾಲ ಬಂದಿದೆ. ನಮ್ಮ ತಂದೆಯವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಮತದಾರರು ಮತ್ತೊಮ್ಮೆ ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ ಎಂದು ಅಭಿಜ್ಞ ಮಾಧುಸ್ವಾಮಿ ಹೇಳಿದರು. ನಮ್ಮ ತಂದೆಯವರ ಅಭಿವೃದ್ಧಿ ಕಾರ್ಯಗಳೇ ವಿರೋಧಿಗಳ ಟೀಕೆಗೆ ಉತ್ತರ ನೀಡುತ್ತವೆ. ಮತದಾರರು ನೀಡಿದ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಿದ್ದು ಮುಂದೆಯೂ ನಿಭಾಯಿಸುತ್ತಾರೆ. ಹಾಗಾಗಿಯೇ ಮತದಾರರಿಗೆ ಮಾಧುಸ್ವಾಮಿ ಅವರಿಗೆ ಕೊಟ್ಟ ಮತಗಳು ವ್ಯರ್ಥವಾಗಿಲ್ಲವೆಂಬ ನಂಬಿಕೆ ಆತ್ಮವಿಶ್ವಾಸ ಇದೆ. ತಾಲೂಕಿನ ಅಭಿವೃದ್ಧಿಗಾಗಿ ಮತ್ತೆ ನಮ್ಮ ತಂದೆಯವರನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದರು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಂದಿಕೆರೆಯಲ್ಲಿ ಅಭಿಜ್ಞ ಮಾಧುಸ್ವಾಮಿ ಅವರು ಅನೇಕ ಯುವಕರನ್ನು ಬಿಜೆಪಿಗೆ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net