

ಅಲ್ವಾರ್(ರಾಜಸ್ಥಾನ): ಜ್ಞಾನವಾಪಿ ಮಸೀದಿ ಕೇಸಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಚಾರುಲ್ ಎಂಬುವರಿಗೆ ಕೊಲೆ ಬೆದರಿಕೆ ಬಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕರ್ತೆ ಜಾಲತಾಣದಲ್ಲಿ ಪ್ರವಾದಿಯರವನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಪ್ರವಾದಿಯನ್ನು ನಿಂದನೆ ಮಾಡಿದರೆ ಶಿರಚ್ಛೇದ ಮಾಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಪತ್ರ ಬಂದಿರುವ ಊರಿನ ಗ್ರಾಮಸ್ಥರನ್ನು ವಿಚಾರಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಅಪರಾಧಿಗಳ ಪತ್ತೆಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ.
ಬೆದರಿಕೆ ಬಂದಿರುವ ಪತ್ರದ ಬರಹವನ್ನು ಗಮನಿಸಿದರೆ ಮಕ್ಕಳ ಹಸ್ತಾಕ್ಷರದಂತಿದೆ. ಮಕ್ಕಳನ್ನು ಬಳಸಿಕೊಂಡು ಬೆದರಿಕೆ ಪತ್ರ ಬರೆದಿರುವ ಸಾಧ್ಯತೆ ಇದೆ. ಉದಯಪುರ ಘಟನೆಯ ಮಾದರಿಯಲ್ಲಿ ಬಿಜೆಪಿ ಕಾರ್ಯಕರ್ತೆಗೆ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದು ಸರ್ದಾರ್ ಪೊಲೀಸ್ ಠಾಣಾಧಿಕಾರಿ ಅಜಿತ್ ಸಿಂಗ್ ತಿಳಿಸಿದ್ದಾರೆ.
"ಬೆಳಗ್ಗೆ 7.45ರ ಸುಮಾರಿಗೆ ಮಕ್ಕಳೊಂದಿಗೆ ಇದ್ದಾಗ ನನ್ನ ಫ್ಲ್ಯಾಟ್ಗೆ ಲಕೋಟೆ ಬಂದಿರುವುದನ್ನು ನೋಡಿದೆ. ಪತ್ರದ ಕವರ್ ಮೇಲೆ ನನ್ನ ಹೆಸರು, ದೂರವಾಣಿ ಸಂಖ್ಯೆ ಮತ್ತು ವಿಳಾಸ ಬರೆಯಲಾಗಿತ್ತು" ಎಂದು ಬಿಜೆಪಿ ಕಾರ್ಯಕರ್ತೆ ಮಾಧ್ಯಮಗಳಿಗೆ ಹೇಳಿದ್ದಾರೆ.
ಪತ್ರದಲ್ಲಿ ಏನಿದೆ?
ಬಿಜೆಪಿ ಕಾರ್ಯಕರ್ತೆಗೆ ಕೊಲೆ ಬೆದರಿಕೆ ಬಂದ ಪತ್ರದಲ್ಲಿ "ಜ್ಞಾನವಾಪಿ ಮಸೀದಿ ನಮ್ಮದು. ಮಸೀದಿಯ ಕುರಿತಾಗಿ ಹೇಳಿಕೆ ನೀಡಿದರೆ ತಲೆ ಕತ್ತರಿಸಿ, ದೇಹವನ್ನು 56 ತುಂಡು ಮಾಡಲಾಗುವುದು. ಉದಯಪುರದ ಕನ್ಹಯ್ಯಲಾಲ್ನಿಗೆ ಎದುರಾದ ಪರಿಸ್ಥಿತಿ ನಿನಗೂ ಆಗಲಿದೆ. ಸೆ. 25 ನಿನ್ನ ಕೊನೆಯ ದಿನವಾಗಲಿದೆ'' ಎಂದು ಬರೆದಿದೆ.
"ಪತ್ರವನ್ನು ಓದಿದ ನಂತರ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದೇನೆ. ಪೊಲೀಸರು ಮನೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಆದರೆ ಎಫ್ಐಆರ್ ಇನ್ನೂ ದಾಖಲಿಸಿಲ್ಲ. ಪೊಲೀಸರ ತನಿಖೆಯಿಂದ ತೃಪ್ತಳಾಗಿಲ್ಲ" ಎಂದು ಬಿಜೆಪಿ ಕಾರ್ಯಕರ್ತೆ ಚಾರುಲ್ ತಿಳಿಸಿದ್ದಾರೆ. (ಏಜೆನ್ಸೀಸ್)