VIDEO : ಕಬಡ್ಡಿ ಆಟಗಾರರಿಗೆ ಶೌಚಗೃಹದಲ್ಲಿ ಊಟದ ವ್ಯವಸ್ಥೆ; ಜಾಲತಾಣದಲ್ಲಿ ಆಕ್ರೋಶ

New Project (4)
Published on

ಉತ್ತರ ಪ್ರದೇಶ: ಮಹಿಳಾ ಕಬಡ್ಡಿ ಆಟಗಾರರಿಗೆ ಟಾಯ್ಲೆಟ್​​ನಲ್ಲಿ ಊಟ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಟಗಾರರು ಟಾಯ್ಲೆಟ್​​ನಲ್ಲಿ ಊಟ ಪಡೆದುಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಾಜಕೀಯ ವಲಯದಿಂದಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಅಂಡರ್-17 ಕಬಡ್ಡಿ ಪಂದ್ಯಾಟವನ್ನು ಆಡಲು ಮಹಿಳಾ ತಂಡ ಸಹರಾನ್ಪುರಕ್ಕೆ ಬಂದಿದ್ದರು. ಇವರಿಗೆ ಸೂಕ್ತ ರೀತಿಯಲ್ಲಿ ಊಟದ ವ್ಯವಸ್ಥೆ ಮಾಡದೇ ಇರುವುದು ವೈರಲ್ ಆಗಿರುವ ವಿಡಿಯೋದಿಂದ ತಿಳಿದು ಬಂದಿದೆ. ಆಟಗಾರರು ಟಾಯ್ಲೆಟ್​​ನ ಒಳಗಿದ್ದ ಪಾತ್ರೆಯಿಂದ ಅನ್ನ ತೆಗೆದುಕೊಳ್ಳುತ್ತಿರುವುದು ಕಾಣುತ್ತಿದೆ. ಅಲ್ಲೇ ಪಕ್ಕದಲ್ಲಿ ನೆಲೆದ ಮೇಲೆ ಕಾಗದ ಹಾಸಿ 'ಪೂರಿ'ಗಳನ್ನು ಇರಿಸಿದ್ದಾರೆ. ಜೊತೆಗೆ ನೆಲದೇ ಮೇಲೆ ತರಕಾರಿಗಳನ್ನು ಚೆಲ್ಲಿರುವುದು ವೈರಲ್ ಆಗಿರುವ ವಿಡಯೋದಲ್ಲಿ ಕಂಡುಬಂದಿದೆ.

ಒಂದು ನಿಮಿಷದ ಈ ವಿಡಿಯೋದಲ್ಲಿ ಮೂತ್ರ ಮಾಡುವ ಜಾಗದಲ್ಲೇ ಆಹಾರ ಪದಾರ್ಥವನ್ನು ಇರಿಸಿರುವುದು ತಿಳಿಯುತ್ತದೆ. ಟಾಯ್ಲೆಟ್​​ನ ಒಳಗೆ ಇರಿಸಿದ್ದ ಅನ್ನವನ್ನು ಆಟಗಾರರು ತಮ್ಮ ತಟ್ಟೆಗೆ ಹಾಕಿಕೊಂಡು ಹೊರಹೋಗುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಸ್ವಿಮ್ಮಿಂಗ್ ಫೂಲ್ ಬಳಿ ಆಹಾರ ಸಿದ್ಧಪಡಿಸುತ್ತಿರುವುದು ಕಂಡು ಬಂದಿದೆ.

ವೈರಲ್ ಆಗಿರುವ ವಿಡಿಯೋಗೆ ಟೀಕೆಗಳು ಬರುತ್ತಿದ್ದಂತೆ ಎಚ್ಚೆತ್ತ ಉತ್ತರ ಪ್ರದೇಶ ಸರ್ಕಾರ ಸಹರಾನ್ಪುರದ ಕ್ರೀಡಾ ಅಧಿಕಾರಿ ಅನಿಮೇಶ್​ ಸಕ್ಸೇನಾ ಅವರನ್ನು ಅಮಾನತು ಮಾಡಿದೆ. ಆಟಗಾರರಿಗೆ ಸರಿಯಾದ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸೂಕ್ತ ತನಿಖೆಗೆ ಸೂಚಿಸಲಾಗಿದೆ. ಈ ಬಗ್ಗೆ ಮೂರು ದಿನದಲ್ಲಿ ವರದಿ ತರಿಸಲಾಗುವುದು ಎಂದು ಸಹರಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಖಿಲೇಶ್ ಸಿಂಗ್ ಪ್ರತಿಕ್ರಿಯಸಿದ್ದಾರೆ.

ಕ್ರೀಡಾಂಗಣದಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದೆ. ಈ ವೇಳೆ ಮಳೆಯಾಗುತ್ತಿದ್ದರಿಂದ ಸ್ವಿಮ್ಮಿಂಗ್ ಫೂಲ್ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಿದ್ದೆವು. ಸಿದ್ಧವಾದ ಆಹಾರ ಇಡಲು ಸ್ಥಳಾವಕಾಶದ ಕೊರತೆ ಉಂಟಾಗಿದ್ದರಿಂದ ಈಜುಕೊಳದ ಪಕ್ಕದ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಆಹಾರ ಇಡಲಾಗಿತ್ತು ಎಂದು ಅಮಾನತಾದ ಕ್ರೀಡಾ ಅಧಿಕಾರಿ ಅನಿಮೇಶ್​ ಸಕ್ಸೇನಾ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net