

ಬೆಂಗಳೂರು: ಪಶ್ಚಿಮ ಘಟ್ಟ ಹಾಗೂ ನೆರೆಯ ಮಹಾರಾಷ್ಟ್ರ, ಕೇರಳದಲ್ಲಿ ಭರಪೂರ ಮಳೆಯಿಂದ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ರಾಜ್ಯದ 12 ಜಿಲ್ಲೆಗಳು ಪ್ರವಾಹ ಬಾಧಿತವಾಗಿ ಸಾವು-ನೋವು, ಕಷ್ಟ-ನಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ. ವಸ್ತುಸ್ಥಿತಿ ಅಧ್ಯಯನ, ಸರ್ಕಾರ ಕೈಗೊಂಡ ಕ್ರಮಗಳ ಪರಿಶೀಲನೆಗಾಗಿ ಬಿಜೆಪಿಯ ಆರು ತಂಡಗಳು ಮಂಗಳವಾರ ಅಧ್ಯಯನ ಪ್ರವಾಸ ಕೈಗೊಳ್ಳಲಿವೆ.
ಕಾವೇರಿ, ಕೃಷ್ಣಾ, ವರದಾ, ಘಟಪ್ರಭಾ, ಮಲಪ್ರಭಾ, ಗಂಗಾವಳಿ, ದೂದಗಂಗಾ, ವೇದಗಂಗಾ, ತುಂಗಭದ್ರಾ ಮತ್ತಿತರ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ನದಿಗಳ ಸಮೀಪದ ಗ್ರಾಮಗಳು ಜಲಾವೃತ, ಪಟ್ಟಣಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಮನೆಗಳು ಜಲಾವೃತವಾದ ವರದಿಗಳಾಗುತ್ತಿವೆ.
ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ, ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾಘಟಜದ ಅಧ್ಯಕ್ಷರನ್ನು ಒಳಗೊಂಡ ತಂಡಗಳು ನೆರೆಪೀಡಿತ ಪ್ರದೇಶಕ್ಕೆ ಜು.30ರಂದು ಭೇಟಿ ನೀಡಿ, ಅಧ್ಯಯನ ನಡೆಸಲಿವೆ ಎಂದು ರಾಜ್ಯ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ತಂಡ-1: ಆರ್.ಅಶೋಕ್- ಮಂಗಳೂರು, ಬೆಳಗಾವಿ. ತಂಡ-2: ಆರಗ ಜ್ಞಾನೇಂದ್ರ- ಶಿವಮೊಗ್ಗ, ತಂಡ-3: ಡಾ.ಸಿ.ಎನ್.ಅಶ್ವತ್ಥ ನಾರಾಯಣ- ಕೊಡಗು, ಉಡುಪಿ, ತಂಡ-4: ಛಲವಾದಿ ನಾರಾಯಣಸ್ವಾಮಿ- ರಾಯಚೂರು, ಯಾದಗಿರಿ, ತಂಡ-5: ಅರವಿಂದ ಬೆಲ್ಲದ್- ಬಾಗಲಕೋಟೆ, ವಿಜಯಪುರ ಹಾಗೂ ತಂಡ-6: ಬಿ.ಶ್ರೀರಾಮುಲು- ಕೊಪ್ಪಳ, ಬಳ್ಳಾರಿ, ವಿಜಯನಗರ.