ಸಿಎಂ, ಸಚಿವರಿಗೆ ಸಂವಿಧಾನದ ಪ್ರತಿ ಕಳುಹಿಸಲಿದೆ ಬಿಜೆಪಿ !

IMG-20230915-WA0005
Published on

ಬೆಂಗಳೂರು: ದಲಿತರ ಜಮೀನು ಕಬಳಿಸಿ ದೌರ್ಜನ್ಯ ಎಸಗಿದ ಸಚಿವ ಡಿ.ಸುಧಾಕರ್ ಅವರನ್ನು ಮಂತ್ರಿ ಮಂಡಲದಲ್ಲಿ ಉಳಿಸಿಕೊಂಡು ರಕ್ಷಣೆ. ಎಸ್ ಸಿ, ಎಸ್ ಟಿ ಅನುದಾನ ಗ್ಯಾರಂಟಿಗಳಿಗೆ ಬಳಕೆ. ಸನಾತನ ಧರ್ಮದ ಬಗ್ಗೆ ಹಿಡಿತವಿಲ್ಲದ ಮಾತು. ನಕಲಿ ಸುದ್ದಿ ಪತ್ತೆ ಹೆಸರಿನಲ್ಲಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಕಾಂಗ್ರೆಸ್ ಸರ್ಕಾರ ಬೆದರಿಕೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಿರ್ದಿಷ್ಟ ಪರಿಚ್ಛೇದಗಳನ್ನು ಗುರುತು ಹಾಕಿ ಸಂವಿಧಾನ ಪ್ರತಿ ಕಳುಹಿಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಿವೃತ್ತ  ಐಪಿಎಸ್ ಅಧಿಕಾರಿ ಭಾಸ್ಕರರಾವ್, ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನಿಮಿತ್ತ ಸಂವಿಧಾನ ಪೀಠಿಕೆ ಓದಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಸ್ವಾಗತಾರ್ಹ. ಈ ಕೆಲಸವನ್ನು ಬಿಜೆಪಿ ಆಡಳಿತಾವಧಿಯಲ್ಲಿ ಆರಂಭಿಸಲಾಗಿದೆ. ಕಾಂಗ್ರೆಸ್ ಪಕ್ಷ ಮೊಟ್ಟ ಮೊದಲ ಬಾರಿಗೆ ಈ ಪ್ರಯತ್ನಕ್ಕೆ ಕೈಹಾಕಿದೆ ಎಂದರು.

ಆದರೆ ಸಂವೈಧಾನಿಕ ಹುದ್ದೆಗಳಲ್ಲಿ ಕುಳಿತವರ ನಡೆ- ನುಡಿಗಳು ಸಂವಿಧಾನಕ್ಕೆ ಬದ್ಧವಾಗಿಲ್ಲ. ಮಾನವೀಯ ಮೌಲ್ಯ, ಸಂಸ್ಕಾರ, ಪ್ರಕೃತಿಯನ್ನು ಸಂರಕ್ಷಿಸುವ ಬಗ್ಗೆ ಅತ್ಯಂತ ಪುರಾತನವಾದ ಸನಾತನ ಧರ್ಮ ಹೇಳಿಕೊಡುತ್ತದೆ. ಸಂತರು, ಮಹಾಂತರು ಹಾಗೂ ಮಹನೀಯರಿಗೆ ಪ್ರೇರಣೆ ನೀಡಿದೆ. ಸಂವಿಧಾನ ಪೀಠಿಕೆಯಲ್ಲೇ ಪರಧರ್ಮ ಸಹಿಷ್ಣುತೆಯ ಪ್ರಸ್ತಾಪವಿದೆ. ತಮಿಳುನಾಡಿನ ಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡು, ಸನಾತನ ಧರ್ಮದ ಮನಸೋಇಚ್ಛೆ ಮಾತನಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕನಿಷ್ಠಪಕ್ಷ ಖಂಡಿಸಿಲ್ಲ ಎಂದು ಎನ್.ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳು ಸೇರಿ ಮಾಧ್ಯಮಗಳಲ್ಲಿ ಅಭಿಪ್ರಾಯ ದಾಖಲಿಸುವ, ಹೇಳಿಕೆ ನೀಡುವ, ವಿಮರ್ಶಿಸುವ ಹಕ್ಕು ಪ್ರತಿಯೊಬ್ಬರಿಗಿದೆ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು,‌ ಐಪಿಸಿ 66ಎ ಕಾಯ್ದೆ ವಜಾಗೊಳಿಸಿದೆ. ಈಗ ಫ್ಕಾಕ್ಟ್ ಚೆಕ್ ಹೆಸರಿನಲ್ಲಿ ಇದೇ ಕಾಯ್ದೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಹಿಂಬಾಗಿಲ ಮೂಲಕ ತರಲು ಹವಣಿಸಿದ್ದಾರೆ. ಹಿಡಿ ಬಡಿ ಸರ್ಕಾರದ ಬಗ್ಗೆ ಹೆದರಿಕೆಯಾಗಿದ್ದು, ಸಿಎಂ ಹಾಗೂ ಸಚಿವರಿಗೆ ಕುರಿಯರ್ ಮುಖೇನ ಸಂವಿಧಾನದ ಪ್ರತಿ ಕಳುಹಿಸುತ್ತೇವೆ ಭಾಸ್ಕರರಾವ್ ತಿವಿದರು.

ದಲಿತರ ಮೇಲೆ ತೋರಿಕೆಯ ಪ್ರೀತಿ

ಕಾಂಗ್ರೆಸ್ ಸರ್ಕಾರ ಮೊಟ್ಟ ಮೊದಲು ಸಂವಿಧಾನ ಪೀಠಿಕೆ ಓದಿಸುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸಂವಿಧಾನ ಒಪ್ಪಿದ ದಿನವಾದ ನ.26ನ್ನು ಸಂವಿಧಾನ ದಿನವೆಂದು ಘೋಷಿಸಿ, ಜ.26ರವರೆಗೆ ಈ ಕುರಿತು ಜಾಗೃತಿ ಮೂಡಿಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ‌ ಬಿಜೆಪಿ ಸರ್ಕಾರವಿದ್ದಾಗ ವಿಧಾನಸಭಾದ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನ ಪೀಠಿಕೆ ಓದುವ, ಆರು ದಿನಗಳ ಕಾಲ ಸಂವಿಧಾನ ಕುರಿತು ಚರ್ಚೆಗೆ ಅಧಿವೇಶನದಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಪೀಠಿಕೆ ಓದುವ ತೋರಿಕೆಯ ನಾಟಕದ ಮೂಲಕ ದಲಿತರ ಮತಗಳನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ ಎಂದು ಮಾಜಿ ಮಂತ್ರಿ ಎನ್.ಮಹೇಶ್ ವಾಗ್ದಾಳಿ ಮಾಡಿದರು.

ಸಂವಿಧಾನದ 46ನೇ ವಿಧಿಯು ಅಸ್ಪೃಶ್ಯತೆ ಆಚರಣೆ,‌ ಪರಿಶಿಜಾತಿ, ಪಂಗಡಗಳು ಹಾಗೂ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯ ನಿರ್ಬಂಧಿಸುತ್ತದೆ. ಜತೆಗೆ ಈ ಸಮುದಾಯಗಳನ್ನು ಆರ್ಥಿಕ, ಶೈಕ್ಷಣಿಕವಾಗಿ ಸಂರಕ್ಷಿಸಿ ವಿಶೇಷವಾಗಿ ಆದ್ಯತೆ ನೀಡಿ ಸಾಮಾಜಿಕವಾಗಿ ಬಲಪಡಿಸಲು ಹೇಳುತ್ತದೆ ಎಂದರು.

ದಲಿತರ ಮೇಲೆ ದಬ್ಬಾಳಿಕೆ ನಡೆಸಿದ ಸಚಿವ ಸುಧಾಕರ್ ಅವರನ್ನು ತಕ್ಷಣ ವಜಾಗೊಳಿಸಿ ಅರೆಸ್ಟ್ ಮಾಡಿಸಬೇಕಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ. ಸಂವಿಧಾನಕ್ಕೆ ವಿರುದ್ಧವಾದ ನಡೆ- ನುಡಿಯನ್ನು ಸಿದ್ದರಾಮಯ್ಯ ಮತ್ತವರ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿಕೊಡಲು ಸಂವಿಧಾನದ ಪ್ರತಿಯನ್ನು ಕಳುಹಿಸುತ್ತಿದ್ದೇವೆ ಎಂದು ಎನ್.ಮಹೇಶ್ ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net