

ಬೆಂಗಳೂರು: ಬಿಟ್ಕಾಯಿನ್ ದಂಧೆ ವಿಚಾರವಾಗಿ ಪರಸ್ಪರ ಕೆಸರೆರಚಾಟ ಮುಂದುವರಿದಿದ್ದು, ಪ್ರತಿಪಕ್ಷ ಕಾಂಗ್ರೆಸ್ ಅಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರ ಬಿಡುತ್ತಿದೆ. ಇದರಿಂದಾಗಿ ಪ್ರಕರಣದಲ್ಲಿ ಏನೋ ಇದೆ ಎಂಬ ಅನುಮಾನ ಜನಸಾಮಾನ್ಯರಲ್ಲಿ ಹುಟ್ಟಿಕೊಂಡಿದೆ. ಈ ಹಗರಣವನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಕಾಂಗ್ರೆಸ್ ನಾಯಕರು ವಾಗ್ದಾಳಿ, ಆರೋಪ ಮುಂದುವರಿಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಸಾವಿರಾರು ಕೋಟಿ ರೂ.ಗಳ ಅವ್ಯವಹಾರವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಬಿಜೆಪಿ ಪಾತ್ರ ಏನೂ ಇಲ್ಲವೆಂದಾದರೆ ವಿವಿಧ ಹಂತದ ತನಿಖೆಯ ಪ್ರಗತಿ ವರದಿ ಹೊರಗಿಡಲಿ ಎಂದೂ ಕಾಂಗ್ರೆಸ್ ಸವಾಲು ಹಾಕಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿಟ್ಕಾಯಿನ್ ದಂಧೆ ನಡೆದಿದೆ. ಈ ಪ್ರಕರಣದ ಆರೋಪಿಯು ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಹಾಗೂ ಮಾಜಿ ಸಚಿವ ಲಮಾಣಿ ಪುತ್ರ ದರ್ಶನ್ ಅವ್ಯವಹಾರ ನಡೆಸಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ಬಿಜೆಪಿ ಪ್ರತ್ಯಾರೋಪಿಸಿದೆ.
ಬಿಟ್ಕಾಯಿನ್ ಪ್ರಕರಣ ಸೇರಿ ಆಧಾರರಹಿತ ಟೀಕೆ-ಟಿಪ್ಪಣಿಗಳು, ಆರೋಪಗಳನ್ನು ನಿರ್ಲಕ್ಷಿಸುವುದೇ ಮದ್ದು ಎಂಬ ಸಂದೇಶವನ್ನು ಸಿಎಂ ಬೊಮ್ಮಾಯಿಗೆ ಪಕ್ಷದ ವರಿಷ್ಠರು ರವಾನಿಸಿದ್ದಾರೆ. ಪ್ರತಿಪಕ್ಷಗಳ ನಾಯಕರು ನೀಡುವ ಹೇಳಿಕೆಗೆ ಅಷ್ಟೇ ಸಮರ್ಥವಾಗಿ ಪಕ್ಷದ ವೇದಿಕೆ ಮೇಲೆ ಪ್ರತ್ಯುತ್ತರಿಸುವುದು ಸೂಕ್ತವೆಂಬ ಸಲಹೆ ನೀಡಿದ್ದಾರೆ. ಆಡಳಿತದಲ್ಲಿ ಕಾರ್ಯಕ್ಷಮತೆ, ಅಭಿವೃದ್ಧಿ ವೇಗಕ್ಕೆ ಒತ್ತು ನೀಡಬೇಕು. ಕುಂದು-ಕೊರತೆಗಳಿಗೆ ತಕ್ಷಣ ಸ್ಪಂದಿಸಿ, ಜನರ ವಿಶ್ವಾಸ ಗಳಿಸಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು, ದೂರದೃಷ್ಟಿ ಕ್ರಮಗಳ ಬಗ್ಗೆ ಹೆಚ್ಚೆಚ್ಚು ಮಾಹಿತಿ ಪ್ರಸಾರ ಮಾಡಿ ಜನರಿಗೆ ತಲುಪಿಸುವುದು ಮುಖ್ಯವಾಗಿದೆ ಎಂಬ ಸಲಹೆಯನ್ನು ಸಿಎಂಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಟ್ ಕಾಯಿನ್ ಆರೋಪಗಳೆಲ್ಲವೂ ಬೇಸ್ಲೆಸ್. ಈ ಬಗ್ಗೆ ಪ್ರಸ್ತಾಪ ಮಾಡುತ್ತಿರುವವರು ವಾಸ್ತವವಾಗಿ ಹಗರಣ ಏನೆಂದು ನಿಖರವಾಗಿ ತಿಳಿಸಲಿ. ದಾಖಲೆಗಳಿದ್ದರೆ, ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಲಿ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಒಂದು ವರ್ಷದ ಹಿಂದೆ ದಾಖಲಾದ ಪ್ರಕರಣಕ್ಕೆ ಬಿಟ್ಕಾಯಿನ್, ವಿದೇಶದಲ್ಲಿ ಹಣಕಾಸಿನ ವ್ಯವಹಾರದ ನಂಟಿನ ಸುಳಿವು ಸಿಕ್ಕ ಬಳಿಕ ಮುಂದಿನ ಕ್ರಮವಹಿಸಲಾಗಿದೆ. ಸಿಐಡಿ, ಸಿಸಿಬಿ ತನಿಖೆ ಜತೆಗೆ ಇಡಿಗೂ ವಿವರ ಸಲ್ಲಿಸಿದ್ದು, ಹೆಚ್ಚಿನ ತನಿಖೆಗೆ ಸಿಬಿಐ ಇಂಟರ್ಪೋಲ್ಗೆ ಶಿಫಾರಸು ಮಾಡಲಾಗಿದೆ. ಪ್ರತಿಪಕ್ಷಗಳ ಆರೋಪಕ್ಕೆ ಸ್ವಪಕ್ಷೀಯರು ತಿದಿಯೊತ್ತಿದ್ದು, ವರಿಷ್ಠರಿಗೆ ನಿಕಟವಾಗುತ್ತಿರುವ ಸಿಎಂ ಬೊಮ್ಮಾಯಿ ಅವರನ್ನು ಹಣಿಯುವ ಪ್ರಯತ್ನವಿದು ಎಂದು ಹೇಳಲಾಗುತ್ತಿದೆ. ಬಿಟ್ಕಾಯಿನ್ ಪ್ರಕರಣದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಬೊಮ್ಮಾಯಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ವದಂತಿ ಹಬ್ಬಿಸಿದ್ದರಲ್ಲಿ ಸ್ವಪಕ್ಷೀಯರ ಕೈವಾಡವಿದೆ ಎಂಬ ದೂರು ವರಿಷ್ಠರ ಮುಂದಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ವೇಳೆ ಸ್ವತಃ ಬೊಮ್ಮಾಯಿ ಈ ವಿಷಯ ಪ್ರಸ್ತಾಪಿಸಿ, ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಕಳಂಕ ತಟ್ಟಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ತೆರಳಿ ಈ ದೂರಿತ್ತಿದ್ದು, ಯಾರೆಂಬುದು ಪತ್ತೆ ಹಚ್ಚಿ ಎಂದು ಬೊಮ್ಮಾಯಿಗೆ ಷಾ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆ ನಡೆಸಿ ನಿಮ್ಮ ಮೇಲಿನ ಆರೋಪ ಸುಳ್ಳೆಂದು ಸಾಬೀತುಪಡಿಸಿ ಎಂದು ಹೇಳಬೇಕಾಗಿದ್ದ ಪ್ರಧಾನಿಗಳು ಆರೋಪವನ್ನೇ ನಿರ್ಲಕ್ಷಿಸಿ ಎಂದು ಸಿಎಂಗೆ ಹೇಳಿದರೆ ಹೇಗೆ? ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ, ನ್ಯಾಯಾಲಯಗಳ ಅಗತ್ಯ ಇಲ್ಲವೇ? ಪ್ರಧಾನಿಗಳ ಏಕಪಕ್ಷೀಯ ತೀರ್ವನವೇ ಅಂತಿಮವೇ? ಈ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನವರು ಯಾರೇ ಇರಲಿ. ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಲಿ. ಸತ್ಯ ಹೊರ ಬರಲಿ.
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದು ಅವಧಿ ಪೂರ್ಣಗೊಳಿಸುವರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಬಿಟ್ ಕಾಯಿನ್ ಹಗರಣ ಪ್ರಧಾನಿ ಮೋದಿ ಅವರ ಗಮನಕ್ಕೂ ಬಂದಿದೆ. ಸಮಗ್ರ ತನಿಖೆಗೆ ಸಿಎಂ ಆದೇಶಿಸಿದ್ದಾರೆ. ಯಾರೇ ಭಾಗಿಯಾಗಿದ್ದರೂ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. ಜಗದೀಶ್ ಶೆಟ್ಟರ್ ದೆಹಲಿ ಪ್ರವಾಸ ವೈಯಕ್ತಿಕ ವಿಚಾರವಾಗಿದೆ. ಈ ಬಗ್ಗೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ವೈಯಕ್ತಿಕ ಕೆಲಸಕ್ಕೆ ಅವರು ದೆಹಲಿಗೆ ತೆರಳಿದ್ದಾರೆ. ಇನ್ನು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಯಾವುದೇ ಸುದ್ದಿ ಇಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.