

ಪಟನಾ: ಬಿಹಾರ ಚುನಾವಣೆಯಲ್ಲಿ ಎನ್ಡಿಎಗೆ ತಲೆನೋವಾಗಿರುವ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ರ ಪುತ್ರ ಚಿರಾಗ್ ಪಾಸ್ವಾನ್ಗೆ ಬಿಜೆಪಿ ಖಡಕ್ ಎಚ್ಚರಿಕೆ ನೀಡಿದೆ. ಸಿಎಂ ನಿತೀಶ್ ಕುಮಾರ್ ನೇತೃತ್ವವನ್ನು ಒಪ್ಪಿ ಎನ್ಡಿಎ ಪರ ಸ್ಪರ್ಧಿಸಿ ಇಲ್ಲವಾದರೆ ಮಿತ್ರಕೂಟದಿಂದ ಉಚ್ಚಾಟಿಸಬೇಕಾಗುತ್ತದೆ ಎಂದು ಹೇಳಿದೆ. ‘ನೀವು (ಚಿರಾಗ್ ಪಾಸ್ವಾನ್) ಯಾವುದೇ ಭ್ರಮೆಯನ್ನು ಇಟ್ಟುಕೊಳ್ಳಬೇಡಿ. ಮಿತ್ರಕೂಟದಲ್ಲಿರುವವರು ಸಂಯಮ, ಸಮಾಲೋಚನೆಯಿಂದ ಮುನ್ನಡೆಯಬೇಕು. ಸಹಕಾರಕ್ಕೆ ಒಪ್ಪದವರನ್ನು ಹೊರದಬ್ಬಲಾಗುವುದು’ ಎಂದು ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಸುಶೀಲ್ ಮೋದಿ ಪತ್ರಿಕಾಗೋಷ್ಠಿಯಲ್ಲೇ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯದ ಪಕ್ಷದ ಉಸ್ತುವಾರಿಯಾದ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಇದ್ದರು. ನಮ್ಮ ಬೆಂಬಲ ಬಿಜೆಪಿಗೆ ಇದೆ ಹೊರತು, ಜೆಡಿಯುಗೆ ಅಲ್ಲ ಎಂದಿರುವ ಚಿರಾಗ್ ಪಾಸ್ವಾನ್, ಜೆಡಿಯು ವಿರುದ್ಧ ಸ್ಪರ್ಧೆ ಮಾಡುವುದಾಗಿ ಘೊಷಿಸಿದ್ದಾರೆ.
ಈ ಮಧ್ಯೆ, ಬಿಜೆಪಿ ಬುಧವಾರ 2 ಕ್ಷೇತ್ರ ಸೇರಿ ಈವರೆಗೆ 29 ಕ್ಷೇತ್ರಗಳಿಗೆ, ಜೆಡಿಯು 115 ಕ್ಷೇತ್ರಗಳಿಗೆ ಮತ್ತು ಕಾಂಗ್ರೆಸ್ 21 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿವೆ.