

TVK Vijay: ಇತ್ತೀಚೆಗೆ ಕರೂರ್‌ನಲ್ಲಿ ಕಾಲ್ತುಳಿತ ಸಂಭವಿಸಿದ ಕೆಲ ದಿನಗಳ ಬಳಿಕ ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ವರದಿಯಾಗಿದ್ದು, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತನ್ನ ಸ್ಥಿತಿಯನ್ನು ಸುದಾರಿಸಿಕೊಳ್ಳಲು ಕೇಸರಿ ಪಾಳಯ ಟಿವಿಕೆ ಕಾರ್ಯಕರ್ತರ ಮೊರೆ ಹೋಗಿದೆ ಎಂದು ಮೂಲಗಳು ತಿಳಿಸಿವೆ.
ಕರೂರ್ ಘಟನೆಗೆ ಸಂಬಂಧಪಟ್ಟಂತೆ ಡಿಎಂಕೆ, ವಿನಾಕಾರಣ ವಿಜಯ್ರನ್ನು ಗುರಿಯಾಗಿಸಿಕೊಂಡಿದ್ದು, ನೀವು ಒಬ್ಬಂಟಿಯಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಮಿಳಗ ವೆಟ್ರಿ ಕಳಗಂ ನಾಯಕರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಚುನಾವಣಾ ಸಂದರ್ಭವಾಗಿರುವುದರಿಂದ ಬಲಿಷ್ಟವಾಗಿರುವ ಆಡಳಿತ ಪಕ್ಷ ಡಿಎಂಕೆಯನ್ನು ಹಣಿಯಬೇಕೆಂದು ನಿರ್ಧರಿಸಿದೆ ಎಂದು ಟಿವಿಕೆಗೆ ತಿಳಿಸಿದ್ದು, ಈ ವೇಳೆ ಯಾವುದೇ ಅಚಾತುರ್ಯಕ್ಕೆ ಆಸ್ಪದ ನೀಡದಂತೆ ವಿಜಯ್ಗೆ ಸಲಹೆ ನೀಡಿದ್ದಾರೆ. ದುರಂತದ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದ ನಟ, ತಮ್ಮನ್ನು ಬೆಂಬಲಿಸಿದ ರಾಜಕೀಯ ನಾಯಕರಿಗೆ ಧನ್ಯವಾದ ಅರ್ಪಿಸಿದ್ದರು.
ಬಿಜೆಪಿಯಂತೆಯೆ, ಕಾಂಗ್ರೆಸ್ ಕೂಡ ಟಿವಿಕೆಯನ್ನು ಸಂಪರ್ಕಿಸಿತ್ತು, ದ್ರಾವಿಡ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯ ಹೊಂದಿರುವ ರಾಜ್ಯ ರಾಜಕೀಯದಲ್ಲಿ ತಮ್ಮ ಛಾಪನ್ನು ಮೂಡಿಸಲು ಹರಸಾಹಸ ಪಡುತ್ತಿರುವ ರಾಷ್ಟ್ರೀಯ ಪಕ್ಷಗಳು, ಇದನ್ನು ಸುವರ್ಣಾವಕಾಶ ಎಂದು ಭಾವಿಸಿವೆ. 2026 ರ ಚುನಾವಣೆಯಲ್ಲಿ ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ವಿಜಯ್ ಈ ಹಿಂದೆ ಅನೇಕ ಬಾರಿ ಹೇಳಿದ್ದಾರೆ, ಆದರೆ, ಇತ್ತೀಚಿನ ಕೆಲ ಬೆಳವಣಿಗೆಗಳು ಅವರ ಕಾರ್ಯತಂತ್ರಗಳ ಬಗ್ಗೆ ಮರು ಚಿಂತನೆ ನಡೆಸುವಂತೆ ಮಾಡಿವೆ. ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂದು ಬಿಜೆಪಿ ನಾಯಕರು ನಂಬಿದ್ದು, ಟಿವಿಕೆ ಕುರಿತಾಗಿ ಮೃಧು ಧೋರಣೆ ಅನುಸರಿಸಿದರೆ, ಟಿವಿಕೆ ಪಕ್ಷದ ಬೆಂಬಲಿಗರ ಮತಗಳನ್ನು ಕ್ರೋಢೀಕರಿಸಲು ಅನುಕೂಲವಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ.
ಸೆಪ್ಟೆಂಬರ್ 27 ರ ಕಾಲ್ತುಳಿತದ ಸಂಭವಿಸಿದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ನಿಯೋಗವನ್ನು ಕರೂರಿಗೆ ಕಳುಹಿಸಿತ್ತ, ಅಂದಿನಿಂದ ಬಿಜೆಪಿ ಡಿಎಂಕೆ ಸರ್ಕಾರವನ್ನು ದೂಷಿಸುತ್ತಿದ್ದು, ಟಿವಿಕೆಯನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿತ್ತು.
ಡಿಎಂಕೆ, ಟಿವಿಕೆಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರೆ, ಇತರ ಪಕ್ಷಗಳು ವಿಜಯ್ ಬಗ್ಗೆ ಮೃದು ಧೋರಣೆ ತಾಳಿವೆ, ವಿಶೇಷವಾಗಿ ಎನ್‌ಡಿಎ ಮೈತ್ರಿ ಕೂಟದ ಅಂಗಪಕ್ಷಗಳು, ಆಡಳಿತರೂಢ ಡಿಎಂಕೆ ನೇತೃತ್ವದ ಸರ್ಕಾರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಬಿಜೆಪಿಯ ಅಂದಾಜಿನ ಪ್ರಕಾರ, ವಿಜಯ್ ಜನಪ್ರಿಯ ನಟರಾಗಿರುವುದರಿಂದ ಟಿವಿಕೆ ಮತದಾರರನ್ನು ಸೆಳೆಯಬಹುದು ಮತ್ತು ಚುನಾವಣೆಗೆ ಮುನ್ನ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬಹುದು. ಡಿಎಂಡಿಕೆ ಮತ್ತು ಎನ್ ಟಿಕೆ ನಂತಹ ಸಣ್ಣ ಪಕ್ಷಗಳಿಂದ ಮತದಾರರು ಟಿವಿಕೆ ಕಡೆಗೆ ವಾಲಬಹುದು ಎಂದು ಅಂದಾಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಬಿಜೆಪಿ ಸಂದಿಗ್ದತೆಯಲ್ಲಿ ಸಿಲುಕಿದ್ದು, ಎಐಎಡಿಎಂಕೆ ಜೊತೆಗಿನ ಮೈತ್ರಿಯೂ ಅದಕ್ಕೆ ಅನಿವಾರ್ಯವಾಗಿದೆ. ಎಐಎಡಿಎಂಕೆ ಸಂಘಟನಾತ್ಮಕ ಬಲ ಮತ್ತು ವಿಜಯ್ ಎನ್‌ಡಿಎಯ ದಕ್ಷಿಣದ ಮಹತ್ವಾಕಾಂಕ್ಷೆಗಳಿಗೆ ನಿರ್ಣಾಯಕ ಒತ್ತಡವನ್ನು ನೀಡಬಹುದು ಎಂದು ಅದು ನಂಬುತ್ತದೆ.
ಸೆಪ್ಟೆಂಬರ್ 27 ರಂದು ನಡೆದ ಕಾಲ್ತುಳಿತದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದರು, ರ್ಯಾಲಿಯಲ್ಲಿ 27,000 ಜನರು ಭಾಗವಹಿಸಿದ್ದರು, ಇದು ನಿರೀಕ್ಷಿತ 10,000 ಭಾಗವಹಿಸುವವರ ಸಂಖ್ಯೆಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಪೊಲೀಸರು ಗಮನಿಸಿದರು. ಈ ದುರಂತಕ್ಕೆ ವಿಜಯ್ ಅವರ ಏಳು ಗಂಟೆಗಳ ವಿಳಂಬವೇ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಮಧ್ಯೆ, ಪೊಲೀಸರ ಲಾಠಿಚಾರ್ಜ್ ಕಾಲ್ತುಳಿತಕ್ಕೆ ಕಾರಣ ಎಂದು ವಿಜಯ್ ಅವರ ಪಕ್ಷ ಆರೋಪಿಸಿದೆ. ಘಟನೆಯ ತನಿಖೆಗಾಗಿ ಮದ್ರಾಸ್ ಹೈಕೋರ್ಟ್ ಎಸ್‌ಐಟಿಯನ್ನು ರಚಿಸಿದ್ದು, ತನಿಖೆ ಆರಂಭಿಸಿದೆ.(ಏಜೆನ್ಸೀಸ್)