ಜಿಮ್​ಗೆ ಬಂದ ಯುವತಿ ಜೊತೆ ಚಾಟಿಂಗ್; ಜಿಮ್​ಗೆ ನುಗ್ಗಿ ಟ್ರೇನರ್ ಮೇಲೆ ಹಲ್ಲೆ ನಡೆಸಿದ ಕುಟುಂಬಸ್ಥರು| Gym Assault

Untitled design - 2025-10-04T145252.033
Published on

Gym Assault: ಜಿಮ್​ಗೆ ಬಂದಂತಹ ಯುವತಿಯೊಬ್ಬಳೊಂದಿಗೆ ಟ್ರೇನರ್ ಚಾಟಿಂಗ್ ಮಾಡಿದ್ದಾಕ್ಕಾಗಿ ಯುವತಿಯ ಕುಟುಂಬಸ್ಥರು ಜಿಮ್​ಗೆ ನುಗ್ಗಿ ಹಿಗ್ಗಾಮುಗ್ಗ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೆ. 23ರ ಸಂಜೆ 5.30ರ ಸುಮಾರಿಗೆ ಅನಂತನಗರದ ಜಿಮ್​ವೊಂದರಲ್ಲಿ ಘಟನೆ ನಡೆದಿದೆ. ಸಂದೀಪ್ ಎಂಬ ಟ್ರೇನರ್​ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಒಬ್ಬ ಮಹಿಳೆ ಸೇರಿದಂತೆ ಜನರ ಗುಂಪೊಂದು ಜಿಮ್‌ಗೆ ಪ್ರವೇಶಿಸುವುದನ್ನು ನೋಡಬಹುದು. ಒಳ ಪ್ರವೇಶಿಸಿದ ತಕ್ಷಣ ಮೂರ್ನಾಲ್ಕು ಜನ ಹಿಗ್ಗಾಮುಗ್ಗ ಥಳಿಸಿದ್ದಾರೆ. ಗುಂಪಿನೊಂದಿಗೆ ಬಂದ ಮಹಿಳೆ, ಸಂದೀಪ್ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿಗಳನ್ನು ತಡೆಯಲು ಪ್ರಯತ್ನಿಸಿದ್ದಾಳೆ.

ಈ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿ, ಜಿಮ್ ಟ್ರೇನರ್ ತನ್ನ ಮಹಿಳಾ  ಕಕ್ಷಿದಾರರೊಬ್ಬರೊಂದಿಗೆ ಸ್ನೇಹ ಬೆಳೆಸಿದ್ದಾನೆ. ಮತ್ತು ಇಬ್ಬರ ನಡುವೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಬಳಿಕ ಆ ಸಂದೇಶಗಳನ್ನು ಯುವತಿ ಸಹೋದರ ನೋಡಿದ್ದು, ಪ್ರಶ್ನಿಸಿದ್ದಾನೆ. ಆದರೆ ಯುವತಿ ತನ್ನ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾಳೆ. ಬಳಿಕ ಯುವತಿಯ ಸಹೋದರ ತನ್ನ ಸ್ನೇಹಿತರನ್ನು ಕರೆದೊಯ್ದು ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ.

ಹಲ್ಲೆ ಮಾಡಿದ ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 115, 118, ಮತ್ತು 189 (ಕಾನೂನುಬಾಹಿರ ಸಭೆ) ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net