

ಹರಿಯಾಣ: ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ ಅದಕ್ಕೆ ಮತ ಹಾಕುವವರು ರಾಕ್ಷಸರು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ, ರಾಜ್ಯಸಭೆ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಹರಿಯಾಣದಲ್ಲಿ ಪಕ್ಷದ ಕಾರ್ಯಕ್ರಮ ಒಂದನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿಯ ಮಿತ್ರ ಪಕ್ಷ ಜನನಾಯಕ ಜನತಾ ಪಾರ್ಟಿಯನ್ನು ಬೆಂಬಲಿಸುವವರು ಸಹ ರಾಕ್ಷಸರು ಎಂದು ಹರಿಹಾಯ್ದಿದ್ದಾರೆ.
ಸುರ್ಜೇವಾಲಾ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕಿಡಿಕಾರಿದ ಬಿಜೆಪಿ ನಾಯಕರು ಚುನಾವಣೆಯಲ್ಲಿನ ಸೋಲುಗಳು ಕಾಂಗ್ರೆಸ್ನ ಈ ಹತಾಶೆ ಮನಸ್ಥಿತಿಗೆ ಕಾರಣವಾಗಿದೆ. ತಮ್ಮ ಪಕ್ಷದ ಯುವರಾಜನನ್ನು ಲಾಂಚ್ ಮಾಡುವಲ್ಲಿ ವಿಫಲರಾಗಿರುವವರು ಈಗ ಸಾರ್ವಕಜನಿಕರನ್ನು ಗುರಿಯಾಗಿಸಿ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆಲ್ಲಾ ಉತ್ತರ ಕೊಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕನ ಹೇಳಿಕೆಗೆ ಚಾಟಿ ಬೀಸಿದ್ದಾರೆ.
ಸುರ್ಜೇವಾಲಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನಿಮ್ಮ ಪಕ್ಷದವರು ಸಾರ್ವಜನಿಕರನ್ನು ರಾಕ್ಷಸರು ಎಂದು ಕರೆಯುತ್ತಿದ್ದಾರೆ. ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರೇ ಇದು ನಿಮ್ಮ ಪ್ರೇಮದ ಆಂಗಡಿಯೇ. ನಿಮ್ಮನೇ ನೀವು ದೇವರು ಎಂದುಕೊಂಡಿದ್ದೀರಾ ಅದಕ್ಕಾಗಿ ಜನರನ್ನು ದೂಷಿಸುವುದು ಒಳ್ಳೆಯ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಇತ್ತ ತಮ್ಮ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ರಣದೀಪ್ ಸುರ್ಜೇವಾಲಾ ಸಮಾಜದಲ್ಲಿ ಬೆಂಕಿ ಹಚ್ಚಿ, ಯುವ ಜನರ ಕನಸುಗಳನ್ನೂ ಸಾಯಿಸುತ್ತಿರುವವರು ರಾಕ್ಷಸರಲ್ಲದೇ ಮತ್ತೇನೂ. ತನ್ನ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಬಿಜೆಪಿ ನಾಯಕರು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ.
ನಾನು ಒಬ್ಬ ಜನಪ್ರತಿನಿಧಿಯಾಗಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನನ್ನ ಕರ್ತವ್ಯ. ನನ್ನ ಕೊನೆಯ ಉಸಿರಿರುವವರೆಗೂ ನಾನು ಜನರ ಪರ ಧ್ವನಿ ಎತ್ತಲು ಸಿದ್ದನಿದ್ದೇನೆ ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭೆ ಸದಸ್ಯ ರಣದೀಪ್ ಸುರ್ಜೇವಾಲಾ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.