ರಾಜಸ್ಥಾನ ಆಯ್ತು, ಈಗ ಜಾರ್ಖಂಡ್​ನ ಕಾಂಗ್ರೆಸ್​ ಸರ್ಕಾರದ ಮೇಲೆ ಬಿಜೆಪಿ ಕಣ್ಣು

jharkhand
Published on

ರಾಂಚಿ: ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಕೆಳಗಿಳಿಸುವ ಪ್ರಯತ್ನದಲ್ಲಿ ಒಂದಷ್ಟು ಹಿನ್ನಡೆಗೆ ಒಳಗಾಗಿದ್ದರೂ ಬಿಜೆಪಿ ಮತ್ತೊಂದು ರಾಜ್ಯ ಸರ್ಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದೆಯೇ? ಕಾಂಗ್ರೆಸ್​ ಮುಖಂಡರ ಹೇಳಿಕೆಯನ್ನು ನಂಬುವುದಾದರೆ ಹೌದು ಎಂಬ ಉತ್ತರ ದೊರೆಯುತ್ತದೆ.

ಜಾರ್ಖಂಡ್​ನಲ್ಲಿ ಹೇಮಂತ್​ ಸೊರೇನ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿದೆ. ಈ ಸರ್ಕಾರವನ್ನು ಕೆಳಗಿಳಿಸಿ, ತನ್ನ ಸರ್ಕಾರವನ್ನು ಸ್ಥಾಪಿಸಲು ಬಿಜೆಪಿ ರಾಜಕೀಯ ಆಟ ಶುರುವಿಟ್ಟಿದೆ ಎಂದು ಜಾರ್ಖಂಡ್​ ಕಾಂಗ್ರೆಸ್​ ಅಧ್ಯಕ್ಷ ರಾಮೇಶ್ವರ್​ ಒರಾನ್​ ಆರೋಪಿಸಿದ್ದಾರೆ.

ಕಾಂಗ್ರೆಸ್​ನ ಶಾಸಕರ ಪಕ್ಷನಿಷ್ಠೆ ಪ್ರಶ್ನಾತೀತವಾಗಿದೆ. ಆದ್ದರಿಂದ, ಸೊರೇನ್​ ಸರ್ಕಾರವನ್ನು ಕೆಳಗಿಳಿಸುವ ಬಿಜೆಪಿಯ ಆಟ ಜಾರ್ಖಂಡ್​ನಲ್ಲಿ ನಡೆಯುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂಬುದನ್ನು ಪದೇಪದೆ ಸಾಬೀತುಪಡಿಸುತ್ತಿದೆ. ಮೊದಲಿಗೆ ಕರ್ನಾಟಕದಲ್ಲಿ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರವನ್ನು ಉರುಳಿಸಿದರು. ನಂತರ ಮಧ್ಯಪ್ರದೇಶ ಆಯಿತು. ರಾಜಸ್ಥಾನದಲ್ಲಿ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಿದ್ದಾರೆ. ಇದೀಗ ಜಾರ್ಖಂಡ್​ನ ಮೇಲೆ ಅವರ ಕಣ್ಣು ಬಿದ್ದಿದೆ. ಇಲ್ಲಿನ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಂಬಲರ್ಹ ಮೂಲಗಳು ನಮಗೆ ಮಾಹಿತಿ ನೀಡಿವೆ ಎಂದು ಒರಾನ್​ ಹೇಳಿದ್ದಾರೆ.

ಕಾಂಗ್ರೆಸ್​ನ ಅಪಪ್ರಚಾರ: ಜಾರ್ಖಂಡ್​ನಲ್ಲಿ ಹೇಮಂತ್​ ಸೊರೇನ್​ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ. ಬಿಜೆಪಿಯ ಹೆಸರಿಗೆ ಮಸಿ ಬಳಿಯಲು ಕಾಂಗ್ರೆಸ್​ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಜಾರ್ಖಂಡ್​ ಬಿಜೆಪಿಯ ಅಧ್ಯಕ್ಷ ದೀಪಕ್​ ಪ್ರಕಾಶ್​ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಸೊರೇನ್​ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಅದು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ಪಾರಾಗಲು ಕಾಂಗ್ರೆಸ್​ ಅಡ್ಡಮಾರ್ಗ ತುಳಿಯುತ್ತಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಜಾರ್ಖಂಡ್​ ಕಾಂಗ್ರೆಸ್​ಗೆ ತನ್ನ ಶಾಸಕರ ಪಕ್ಷನಿಷ್ಠೆಯ ಬಗ್ಗೆ ಶಂಕೆ ಮೂಡಿದೆ. ಅವರು ಪಕ್ಷಾಂತರ ಮಾಡುವ ಭೀತಿಗೆ ಒಳಗಾಗಿ, ಬಿಜೆಪಿಯ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net