

ನವದೆಹಲಿ: ಕೋವಿಡ್-19 ಪಿಡುಗು ಬೊಲಿವಿಯಾದ ಲೈಂಗಿಕ ಕಾರ್ಯಕರ್ತೆಯರ ಜೀವನವನ್ನು ದುಸ್ತರಗೊಳಿಸಿದೆ. ಒಂದೆಡೆ ಲಾಕ್ಡೌನ್ನಿಂದಾಗಿ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಅವರನ್ನು ಆಕರ್ಷಿಸುವ ಜತೆಗೆ ತಮ್ಮ ಸುರಕ್ಷತೆಗೂ ಒತ್ತು ನೀಡಬೇಕಾದ ಅನಿವಾರ್ಯತೆ ಬೊಲಿವಿಯಾದ ಸಹಕಾರಿ ವೇಶ್ಯಾವಾಟಿಕೆಯಲ್ಲಿ ಇರುವ ಲೈಂಗಿಕ ಕಾರ್ಯಕರ್ತೆಯರದ್ದಾಗಿದೆ.
ಇದೀಗ ಅವರು ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಆರಂಭಿಸಿದ್ದಾರೆ. ಮೈಗೆ ಅಂಟಿಕೊಳ್ಳುವಂಥ, ಪಾರದರ್ಶಕವಾದ ಬಯೋಸೆಕ್ಯೂರಿಟಿ ಸೂಟ್ಗಳಧಾರಣೆ ಆ ಪರಿಹಾರಗಳಲ್ಲಿ ಒಂದಾಗಿದೆ. ಬ್ಲೀಚಿಂಗ್ ದ್ರಾವಣ, ಗ್ಲೋವ್ಸ್ಗಳನ್ನು ಕೂಡ ಬಳಸುವ ಮೂಲಕ ತಮ್ಮನ್ನು ತಾವು ಸುರಕ್ಷಿತಗೊಳಿಸಿಕೊಳ್ಳುತ್ತಿದ್ದಾರೆ.
ಬೊಲಿವಿಯಾದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ ಮಾನ್ಯತೆ ಹೊಂದಿದೆ. ಇದೊಂದು ವೃತ್ತಿಯೆಂದು ಅಲ್ಲಿ ಪರಿಗಣಿಸಲಾಗಿದೆ. ಹಾಗಾಗಿ ಅಲ್ಲಿನ ವೇಶ್ಯೆಯರ ಅಡ್ಡಗೆ ಭೇಟಿ ನೀಡುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಕೋವಿಡ್-19 ಪಿಡುಗಿನ ಭೀತಿ ಈ ಅಡ್ಡೆಗಳನ್ನೂ ಆವರಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಲೈಂಗಿಕ ಕಾರ್ಯಕರ್ತೆಯರು ತಮ್ಮ ಸುರಕ್ಷತೆಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಇದಕ್ಕೆ ಪೂರಕವಾಗಿ 30 ಪುಟಗಳ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಬೊಲಿವಿಯಾದ ರಾತ್ರಿ ಕಾರ್ಮಿಕರ ಸಂಘಟನೆ (ಒಟಿಎನ್) ಸ್ಕಿನ್ಟೈಟ್ ಬಯೋಸೆಕ್ಯೂರಿಟಿ ಸೂಟ್ಗಳಧಾರಣೆಯನ್ನು ಕಡ್ಡಾಯಗೊಳಿಸಿದೆ.
ಗ್ರಾಹಕರನ್ನು ಆಕರ್ಷಿಸಲು ತೊಡೆ ಕಾಣಿಸುವಂತೆ ಧಿರಿಸು ಧರಿಸುವ ಜತೆಗೆ ಮುಖಕ್ಕೆ ಪಾರದರ್ಶಕವಾದ ಕಾಗದದ ಮಾಸ್ಕ್, ಪ್ಲಾಸ್ಟಿಕ್ ವೈಸರ್, ಗ್ಲೋವ್ಗಳು ಮತ್ತು ಪಾರದರ್ಶಕ ರೇನ್ಕೋಟ್ ಧರಿಸಿ ಲೈಂಗಿಕ ಕಾರ್ಯಕರ್ತೆಯೊಬ್ಬರು ಪ್ರದರ್ಶನ ನೀಡಿದರು. ಜತೆಗೆ ಪೋಲ್ ಡಾನ್ಸ್ ಮಾಡುವ ಮುನ್ನ ಅದನ್ನು ಬ್ಲೀಚಿಂಗ್ ದ್ರಾವಣ ಹಾಕಿ ಸ್ವಚ್ಛಗೊಳಿಸುವ ಪ್ರಾತ್ಯಕ್ಷಿಕೆಯನ್ನೂ ನೀಡಿದರು.
ಬಯೋಸೆಕ್ಯೂರಿಟಿ ಸೂಟ್ ನೈಸರ್ಗಿಕವಾದ ನೋಟವನ್ನೇ ಒದಗಿಸುತ್ತದೆ. ಜತೆಗೆ ಕರೊನಾ ಸೋಂಕಿನಿಂದ ನಮಗೆ ರಕ್ಷಣೆಯನ್ನೂ ಒದಗಿಸುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಲೈಂಗಿಕ ಕಾರ್ಯಕರ್ತೆಯರು ಹೇಳಿಕೊಂಡಿದ್ದಾರೆ.