ಶುಶ್ರೂಷಕರ ಆಹೋರಾತ್ರಿ ಧರಣಿಗೆ ಬಿಜೆಪಿ ಬೆಂಬಲ | NHM Nursing staff demand

BJP Support
Published on

ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವೆ ಕಾಯಂ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಎನ್‌ಎಚ್‌ಎಂ ಶುಶ್ರೂಷ ಅಧಿಕಾರಿಗಳು ಅನಿರ್ದಿಷ್ಟ ಆಹೋರಾತ್ರಿ ಧರಣಿ ಹೂಡಿದ್ದು, ‘ಮೇಲೆ ಬಿಳಿ ಬಟ್ಟೆ ಒಳಗೆ ಖಾಲಿ ಹೊಟ್ಟೆ’ ಎಂದ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಮುಷ್ಕರ ನಿರತ ಶುಶ್ರೂಷಾಧಿಕಾರಿಗಳು, ಸಿಬ್ಬಂದಿಯನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಡಾ.ಸಿ.ಎನ್.ಮಂಜುನಾಥ್ ಬುಧವಾರ ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಶುಶ್ರೂಷ ಅಧಿಕಾರಿಗಳು, ನೌಕರರ ಕ್ಷೇಮಾಭಿವೃದ್ಧಿ ಸಂಘದ ವೆಂಕಟರಮಣಪ್ಪ ಮತ್ತಿತರ ಪದಾಧಿಕಾರಿಗಳ ಅಹವಾಲು, ಆಲಿಸಿ ಮನವಿಪತ್ರವನ್ನು ಸ್ವೀಕರಿಸಿದರು. ಪ್ರತಿಪಕ್ಷದಲ್ಲಿದ್ದಾಗ ಬೇಡಿಕೆ, ಹೋರಾಟಕ್ಕೆ ಬೆಂಬಲಿಸಿ ಅಧಿಕಾರಕ್ಕೆ ಬಂದ ಮೇಲೆ ಮರೆತು ಬಿಡುತ್ತಾರೆ ಎಂದು ಧರಣಿನಿರತರು ನೋವು ವ್ಯಕ್ತಪಡಿಸಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಿಸಿದ ನರ್ಸ್‌ಗಳಿಗೆ ಮೂಲ ವೇತನವಿದೆ. ಆದರೆ ಅದೇ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ನೇಮಿಸಿದ ನರ್ಸ್‌ಗಳನ್ನು ಗುತ್ತಿಗೆಯಡಿ ದುಡಿಸಿಕೊಳ್ಳುತ್ತಿದ್ದು, ಮೂಲ ವೇತನವಿರಲಿ, ಸಮಾನ ಕೆಲಸಕ್ಕೆ ಸಮಾನ ವೇತನವೂ ಇಲ್ಲವೆಂದರು.

ಕೇಂದ್ರ ಸರ್ಕಾರದ ಸಬೂಬು

ಬಿಜೆಪಿ ಅಧಿಕಾರದಲ್ಲಿದ್ದಾಗ 40 ದಿನಗಳ ಚಳವಳಿ ನಡೆಸಿದ್ದವು. ಆಗ ಪ್ರತಿಪಕ್ಷದಲ್ಲಿದ್ದ ನಾಯಕರು ಈಗಿನ ಡಿಸಿಎಂ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಮನವಿ ಸ್ವೀಕರಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಸೇವೆ ಕಾಯಂ ತೀರ್ಮಾನಕ್ಕೆ ಬದ್ಧ ಎಂದು ಆಶ್ವಾಸನೆ ನೀಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ್ದರು.

ಎರಡು ವರ್ಷಗಳಾದರೂ ಬೇಡಿಕೆ ಈಡೇರಿಸಿಲ್ಲ. ಎನ್‌ಎಚ್‌ಎಂ ಶುಶ್ರೂಷ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಕಾಯಂಗೊಳಿಸಬೇಕು ಎಂಬ ಸಬೂಬು ನೀಡುತ್ತಿದ್ದಾರೆ. ಆದರೆ ತೆಲಂಗಾಣ, ರಾಜಸ್ಥಾನ, ಮಣಿಪುರ, ಅಸ್ಸಾಂ, ಹಿಮಾಚಲಪ್ರದೇಶ ರಾಜ್ಯ ಸರ್ಕಾರಗಳು ಸೇವೆ ಕಾಯಂ ಮಾಡಿವೆ.

ಆ ರಾಜ್ಯಗಳಿಗೆ ಅಧಿಕಾರವಿದೆ, ಕರ್ನಾಟಕ ಸರ್ಕಾರಕ್ಕೆ ಇಲ್ಲವಾಗಿರುವುದು ಅಚ್ಚರಿ ಜತೆಗೆ ಬೇಸರ ಉಂಟು ಮಾಡುತ್ತದೆ ಎಂದು ಸಂಘದ ಪದಾಧಿಕಾರಿಗಳು ಅಸಹನೆ ವ್ಯಕ್ತಪಡಿಸಿದಾಗ ಬಿಜೆಪಿ ನಾಯಕರು ಸಹಾನುಭೂತಿ ಸೂಚಿಸಿದರು.

ಸದನದಲ್ಲಿ ಪ್ರಸ್ತಾಪ

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಹೋರಾಟಕ್ಕೆ ಪಕ್ಷ ಬೆಂಬಲಿಸುತ್ತದೆ. ಎನ್‌ಎಚ್‌ಎಂ ಶುಶ್ರೂಷಕರು, ಸಿಬ್ಬಂದಿ ನೋವಿನಲ್ಲಿ ನನಗೂ ಪಾಲಿದೆ. ನೇರವಾಗಿ ಸಿಎಂ, ಆರೋಗ್ಯ ಸಚಿವರ ಜತೆಗೆ ಚರ್ಚಿಸಿ, ಸದನದಲ್ಲೂ ಬೇಡಿಕೆಗಳನ್ನು ಪ್ರಸ್ತಾಪಿಸುವ ಭರವಸೆ ನೀಡಿದರು.

ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯೇತರ ಸಿಬ್ಬಂದಿಯೂ ಅಷ್ಟೇ ಮುಖ್ಯವಾಗಿದೆ. ಗುತ್ತಿಗೆ ಆಧಾರದಲ್ಲಿ ದುಡಿಸಿಕೊಂಡು ಸಮಾನ ವೇತನ ನೀಡದಿರುವುದು ಸರಿಯಲ್ಲ. ಆರೋಗ್ಯ ಸಚಿವರು ಕಳಪೆ ಔಷಧಿ ಖರೀದಿ, ದನಗಳಿಗೆ ಕೊಡುವ ಔಷಧಿಯನ್ನು ಜನರಿಗೆ ಕೊಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net