

ಬೆಂಗಳೂರು: ಡಿಸೆಂಬರ್ 9ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೆ ಪ್ರಧಾನ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ತಂತ್ರಗಾರಿಕೆ ರೂಪಿಸುವ ಉದ್ದೇಶದಿಂದ ಮಂಗಳವಾರ ಸಭೆ ನಡೆಸಿತು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಕರೆದ ಸಭೆಯಲ್ಲಿ ಹಿರಿಯ ಶಾಸಕರಾದ ಆರಗ ಜ್ಞಾನೇಂದ್ರ, ಅಶ್ವತ್ಥನಾರಾಯಣ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎನ್. ರವಿಕುಮಾರ್, ಸಿ.ಟಿ.ರವಿ, ಮುಖ್ಯ ಸಚೇತಕ ದೊಡ್ಡನಗೌಡ ಸೇರಿ ಹಲವು ಭಾಗಿಯಾಗಿದ್ದರು.
ವಕ್ಫ್ ವಿವಾದ, ಪಡಿತರ ಕಾರ್ಡ್ ಸಮಸ್ಯೆ, ಅಬಕಾರಿ ಹಗರಣ, ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಅನುದಾನ ಕಡಿತ, ಆದಿಕಾರಿಗಳ ಆತ್ಮಹತ್ಯೆ ಪ್ರಕರಣ ಹೀಗೆ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಹೋರಾಟ ನಡೆಸಲು, ದಾಖಲೆ ಬಿಡುಗಡೆ ಮಾಡಲು ಉದ್ದೇಶಿಸಲಾಯಿತು.
ಇನ್ನು ಈ ವಿಚಾರದಲ್ಲಿ ಜೆಡಿಎಸ್ ಜತೆ ಸಮನ್ವಯ ಸಾಧಿಸಲು ಎಚ್.ಡಿ.ಕುಮಾರಸ್ವಾಮಿವರೊಂದಿಗೆ ಇಷ್ಟರಲ್ಲೇ ಸಭೆ ನಡೆಸಲು ಉದ್ದೇಶಿಸಲಾಗಿದೆ. ಹಾಗೆಯೇ ಉತ್ತರ ಕರ್ನಾಟಕದ ಶಾಸಕರೊಂದಿಗೆ ಸಭೆ ನಡೆಸಿ ಆ ಭಾಗದ ಸಮಸ್ಯೆಗಳನ್ನು ಸದನದಲ್ಲಿ ಗಂಭೀರವಾಗಿ ಪ್ರಸ್ತಾಪಿಸಲು ಸಹ ನಿರ್ಧರಿಸಲಾಗಿದೆ.