ಸರ್ಕಾರ ಮಣಿಸಲು ಸೆ.25 ರಿಂದ ಬಿಜೆಪಿ ವಿವಿಧ ಹಂತದ ಆಂದೋಲನ

govind karjol
Published on

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಯಡಿ ಮೀಸಲಿಟ್ಟ ಅನುದಾನದಲ್ಲಿ 11,144 ಕೋಟಿ ರೂ.ಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿ ಉಪ ಯೋಜನೆಗೆ ಈ ಅನುದಾನ ಮರಳಿಸಲು ಒತ್ತಾಯಿಸಿ ಸೆ.25 ರಿಂದ ಅ.10ರವರೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನಾಂದೋಲನ ನಡೆಯಲಿದೆ.

ಶೋಷಿತ ಸಮುದಾಯಗಳಿಗೆ ಈ ಅನುದಾನ ಬಳಸದಿದ್ದರೆ ಎರಡನೇ ಹಂತದಲ್ಲಿ ಅ.11 ರಿಂದ ಅ.25ರವರೆಗೆ ಜಿಲ್ಲಾ ಸಚಿವರು ಹಾಗೂ ಶಾಸಕರಿಗೆ ಮುತ್ತಿಗೆ ಹಾಕಲಾಗುವುದು. ಎಲ್ಲ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸ, 224 ವಿಧಾನಸಭೆ ಕ್ಷೇತ್ರಗಳಲ್ಲಿ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಎರಡೂ ಹಂತದ ಆಂದೋಲನಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಮೂರನೇ ಹಂತದಲ್ಲಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಯಿಂದ ನ.2ರಂದು ಪಾದಯಾತ್ರೆ ಕೈಗೊಂಡು ವಿಧಾನಸೌಧಕ್ಕೆ ಮುಗ್ತಿಗೆ ಹಾಕಲಾಗುವುದು ಎಂದು ಕಾರಜೋಳ ತಿಳಿಸಿದರು.

ಪದಾಧಿಕಾರಿಗಳ ಸಭೆ ಇಂದು

ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಮಂಗಳವಾರ ಬೆಳಗ್ಗೆ 10.30ಕ್ಕೆ ಚಾಲನೆ ಪಡೆಯಲಿದೆ. ಈ ಸಭೆಯಲ್ಲಿ ರಾಜ್ಯ ನಾಯಕರ ಮುಂದಿನ ಪ್ರವಾಸ, ಲೋಕಸಭೆ ಚುನಾವಣೆ ತಯಾರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಚಾಲ್ತಿಯಲ್ಲಿರುವ ಬೂತ್ ಸಶಕ್ತೀಕರಣ, ನನ್ನ ಮಣ್ಣು ನನ್ನ ದೇಶ ಅಭಿಯಾನದ ಕುರಿತು ವರದಿಗಳ ಪರಾಮರ್ಶೆಯಾಗಲಿದೆ. ರಾಜ್ಯ ಸರ್ಕಾರದ ವೈಲ್ಯಗಳ ವಿರುದ್ಧ ಹೋರಾಟ ರೂಪರೇಷೆ ಚರ್ಚೆಯಾಗಲಿದೆ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಪಕ್ಷದ ರಾಜ್ಯಾಧ್ಯಕ್ಷ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net