ಡಾ. ಸಿಂಗ್​ ಶೋಕಾಚರಣೆ ಮಧ್ಯೆ ರಾಹುಲ್ ಗಾಂಧಿ ವಿದೇಶ ಪ್ರವಾಸ ಸರಿಯೇ? ಬಿಜೆಪಿ ಕಿಡಿಗೆ 'ಕೈ' ತಿರುಗೇಟು | Rahul Gandhi

ವಿಜಯವಾಣಿ (29)
Published on

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನಲೆ ರಾಷ್ಟ್ರವ್ಯಾಪಿ ಏಳು ದಿನಗಳ ಶೋಕಾಚರಣೆ ನಡೆಯುತ್ತಿದೆ. ಇಡೀ ದೇಶವೇ ಶೋಕ ವ್ಯಕ್ತಪಡಿಸುತ್ತಿರುವಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಹೊಸ ವರ್ಷಾಚರಣೆಗಾಗಿ ವಿಯೆಟ್ನಂ ದೇಶಕ್ಕೆ ಹಾರಿರುವುದು ಎಷ್ಟು ಸರಿ? ಎಂದು ಬಿಜೆಪಿ ಕಾಂಗ್ರೆಸ್​ ನಾಯಕನ ವಿರುದ್ಧ ಛೀಮಾರಿ ಹಾಕಿದೆ. ಈ ವಿಷಯಕ್ಕೆ 'ಕೈ' ಮತ್ತು 'ಕಮಲ'ದ ನಡುವೆ ಮಾತಿನ ಜಿದ್ದಾಜಿದ್ದಿ ಭುಗಿಲೆದ್ದಿದೆ.

ಡಿಸೆಂಬರ್ 26ರಂದು ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಗೌರವಾರ್ಥವಾಗಿ ದೇಶಾದ್ಯಂತ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತಿದ್ದು, ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ಹೀಗಿರುವಾಗ ರಾಹುಲ್​ ಗಾಂಧಿ, ಹೊಸ ವರ್ಷ ಆಚರಿಸುವ ಸಲುವಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿರುವುದು ಯಾವ ರೀತಿಯಲ್ಲಿ ಸರಿಯಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸೋಮವಾರ (ಡಿ.30) ರಾಜಕೀಯ ಗದ್ದಲ ಎಬ್ಬಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, "ಮಾಜಿ ಪ್ರಧಾನಿ ಡಾ. ಸಿಂಗ್ ಅವರ ನಿಧನಕ್ಕೆ ದೇಶವು ಶೋಕಿಸುತ್ತಿರುವಾಗ, ರಾಹುಲ್ ಗಾಂಧಿ ಹೊಸ ವರ್ಷವನ್ನು ಆಚರಿಸಲು ವಿಯೆಟ್ನಂ ದೇಶಕ್ಕೆ ಹಾರಿದ್ದಾರೆ. ಮಾಜಿ ಪ್ರಧಾನಿಯವರ ಸಾವನ್ನು ರಾಹುಲ್ ಗಾಂಧಿ ರಾಜಕೀಯಗೊಳಿಸಿದ್ದಾರೆ. ಗಾಂಧಿಗಳು ಮತ್ತು ಕಾಂಗ್ರೆಸ್ಸಿಗರಿಗೆ ಸಿಖ್ಖರನ್ನು ಕಂಡರೆ ದ್ವೇಷ, ಇದೇ ಕಾರಣಕ್ಕೆ ಅವರನ್ನು ದ್ವೇಷಿಸುತ್ತಿದ್ದಾರೆ. ಇಂದಿರಾ ಗಾಂಧಿಯವರು ದರ್ಬಾರ್ ಸಾಹಿಬ್ ಅನ್ನು ಅಪವಿತ್ರಗೊಳಿಸಿದರು ಎಂಬುದನ್ನು ಎಂದಿಗೂ ಮರೆಯಬಾರದು" ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

ಏತನ್ಮಧ್ಯೆ, ಬಿಜೆಪಿ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್, "ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿರುವುದು ಖಾಸಗಿ ಪ್ರವಾಸ ನಿಮಿತ್ತ. ಯಾರೊಬ್ಬರ ಗೌಪ್ಯತೆಗೆ ಸಂಬಂಧಿಸಿದ ವಿಷಯಗಳಲ್ಲಿ ಯಾರಿಗೂ ಸಮಸ್ಯೆಯಾಗಬಾರದು. ರಾಹುಲ್​ ಖಾಸಗಿ ಪ್ರವಾಸ ಕೈಗೊಂಡರೆ ಅದು ನಿಮಗೆ ಏಕೆ ತೊಂದರೆಯಾಗುತ್ತದೆ? ಮೊದಲು ಈ ರಾಜಕೀಯ ಮಾರ್ಗ ಬದಲಿಸುವುದನ್ನು ನಿಲ್ಲಿಸಿ. ಹೊಸ ವರ್ಷದಲ್ಲಿ ಆದಷ್ಟು ಚೇತರಿಸಿಕೊಳ್ಳಿ" ಎಂದು ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net