

ಬೆಂಗಳೂರು: RSS ಸಹ ಸಂಸ್ಥಾಪಕರಾದ ಕೇಶವ್ ಬಲಿರಾಮ್ ಹೆಡ್ಗೇವಾರ್ ತರಹದ ಹೇಡಿಗಳ ಪಾಠಗಳನ್ನು ಶಾಲೆಗಳ ಪಠ್ಯದಲ್ಲಿರಲು ಬಿಡುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ತಿರುಗೇಟು ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ರಾಜ್ಯದಲ್ಲಿ ಕಾಂಗ್ರೆಸ್ ಬರುತ್ತಿದ್ದಂತೆ ಅಲ್ಪಜ್ಞಾನಿಗಳು, ಮತಿಗೇಡಿಗಳು ಬಾಲ ಬಿಚ್ಚುತ್ತಿದ್ದಾರೆ ಎಂದು ಹರಿಹಾಯ್ದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಬರುತ್ತಿದ್ದಂತೆ ಅಲ್ಪಜ್ಞಾನಿಗಳು, ಮತಿಗೇಡಿಗಳು ಬಾಲ ಬಿಚ್ಚುತ್ತಿದ್ದಾರೆ. ಅಂದ ಹಾಗೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಅಂದರೆ , ಮಾನಸಿಕ ಅಸ್ವಸ್ಥರಾಗಿರುವ ಬಿ.ಕೆ. ಹರಿಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ದೂರವಿಟ್ಟಿದ್ದು ಎಂದು ಲೇವಡಿಯಾಡಿದೆ.
ಗೌರವಾನ್ವಿತ ಹೆಡ್ಗೇವಾರ್ರಂತಹ ಅಪ್ರತಿಮ ದೇಶಭಕ್ತರ ಹೆಸರು ಹೇಳುವ ಯೋಗ್ಯತೆಯನ್ನು ಹರಿಪ್ರಸಾದರವರು ಮೊದಲು ಸಂಪಾದಿಸಲಿ, ಉಳಿದದ್ದೆಲ್ಲ ಮತ್ತೆ ಎಂದು ಟ್ವೀಟ್ ಮಾಡಿ ಹೇಳಿಕೆಗೆ ತಿರುಗೇಟು ನೀಡಿದೆ.
ಗುರುವಾರ ಶಿವಮೊಗ್ಗದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ ಬಿ.ಕೆ. ಹರಿಪ್ರಸಾದ್ ಕೇಶವ್ ಬಲಿರಾಮ್ ಹೆಡ್ಗೇವಾರ್ ತರಹದ ಹೇಡಿಗಳ ಪಾಠಗಳನ್ನು ಶಾಲೆಗಳ ಪಠ್ಯದಲ್ಲಿರಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಶಿಕ್ಷಣ ಸೇರಿದಂತೆ ಯಾವ ಇಲಾಖೆಯಲ್ಲೂ ಸಂಘ ಪರಿವಾರದ ಸಿದ್ಧಾಂತಗಳನ್ನು ಇರಲು ಬಿಡುವುದಿಲ್ಲ. ಹೆಡಗೇವಾರ್ ತರಹದ ರಣಹೇಡಿಗಳ ವಿಚಾರಗಳು ಇನ್ನು ಮುಂದೆ ಪಠ್ಯದಲ್ಲಿ ಇರುವುದಿಲ್ಲ. ಹೆಡಗೇವಾರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ಬಿಜೆಪಿಯವರು ನಿರೂಪಿಸಲಿ. ಬ್ರಿ
ಟಿಷರ ಬಳಿ ಕ್ಷಮಾಪಣೆ ಕೇಳಿದವರಿಗೆಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಎಂದು ಮನ್ನಣೆ ನೀಡಲು ಸಾಧ್ಯವಿಲ್ಲ. ಅವರೆಲ್ಲ ಬ್ರಿಟಿಷರ ಬಳಿ ಕ್ಷಮಾಪಣಾ ಪತ್ರ ನೀಡಿದ್ದು ಏಕೆ ಎಂದು ಬಿಜೆಪಿಯರು ನಿರೂಪಿಸಲಿ ಎಂದು ಸವಾಲೆಸೆದಿದ್ದರು.