ಬಿಜೆಪಿಯಿಂದ ಸಿಡಿದು ಹೋದವರು ಮರಳಿ ನೆಲೆಗೆ?

BJP ROUND
Published on

ಬೆಂಗಳೂರು:
ಲೋಕಸಭಾ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ನಾನಾ ಕಾರಣಗಳಿಗಾಗಿ ಪಕ್ಷದಿಂದ ದೂರವಾಗಿರುವ ಮುಖಂಡರನ್ನು ಮನವೊಲಿಸಿ ಮತ್ತೆ ಮರಳಿ ಪಕ್ಷಕ್ಕೆ ಕರೆತರಲು ವೇದಿಕೆ ಸಜ್ಜುಗೊಳ್ಳುತ್ತಿದೆ.
ಮುಂಬರಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ನಿರ್ಧರಿಸಿರುವ ಬಿಜೆಪಿ ವರಿಷ್ಠರು, ಈ ನಿಟ್ಟಿನಲ್ಲಿ ಪಕ್ಷದೊಳಗಿರುವ ಅಸಮಾಧಾನಗಳನ್ನು ಸರಿಪಡಿಸಿ, ಹೊರಗೆ ಹೋಗಿರುವ ನಾಯಕರನ್ನು ಮತ್ತೆ ಪಕ್ಷದ ನೆಲೆಗೆ ಕರೆದುಕೊಂಡು ಬರಲು ಮುಂದಾಗಿದ್ದಾರೆ.
ರಾಯಚೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್ ನೀಡಲಿಲ್ಲ ಎಂದು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಮೌನಕ್ಕೆ ಜಾರಿದ್ದ ಮಾಜಿ ಸಂಸದ ಬಿ.ವಿ.ನಾಯಕ್ ಅವರ ಜೊತೆಗೆ ಪಕ್ಷದ ಮುಖಂಡರು ಮಾತನಾಡಿ ಅಸಮಾಧಾನ ತಣಿಸಲು ಕಸರತ್ತು ನಡೆಯುತ್ತಿದೆ.
ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರಿಗೆ ಕೋರ್ ಕಮಿಟಿಯಿಂದ ಕೋಕ್ ನೀಡಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಅವರ ಜೊತೆಯಲ್ಲಿಯೂ ಮಾತನಾಡಿ ಸಮಸ್ಯೆ ಸರಿಪಡಿಸಲು ಮತ್ತು ಸ್ಥಳೀಯವಾಗಿರುವ ಅಸಮಾಧಾನ ನೀಗಿಸಲು ಪ್ರಯತ್ನ ನಡೆಯುತ್ತಿದೆ.

ರಘುಪತಿಭಟ್
ವಿಧಾನಸಭೆ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಪಕ್ಷದ ವಿರುದ್ದವೇ ಬಂಡೆದ್ದು ಚುನಾವಣೆಗೆ ಸ್ಪರ್ಧೆ ಮಾಡಿದ್ದ ಉಡುಪಿಯ ರಘುಪತಿಭಟ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಚರ್ಚೆ ನಡೆಯುತ್ತಿದೆ. ಚುನಾವಣೆಯಲ್ಲಿ ವ್ಯತ್ಯಾಸವಾಗಿರಬಹುದು. ಆದರೆ, ಪ್ರಖರ ಹಿಂದುತ್ವವಾದಿ ರಘುಪತಿಭಟ್ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವುದಕ್ಕೆ ಬಿಜೆಪಿಯ ಹಿರಿಯ ನಾಯಕರೇ ಆಸಕ್ತಿ ಹೊಂದಿದ್ದಾರೆ.

ಕೆ.ಎಸ್.ಈಶ್ವರಪ್ಪ
ತಮ್ಮ ಪುತ್ರನಿಗೆ ಟಿಕೆಟ್ ಕೊಡಲಿಲ್ಲ ಎಂದು ಬಂಡಾಯ ಬಾವುಟ ಹಾರಿಸಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದವೇ ತಿರುಗಿ ಬಿದ್ದಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಬಿಜೆಪಿಗೆ ಮರಳಲು ಮುಂದಾಗಿದ್ದಾರೆ. ಬಿಜೆಪಿಯೇ ನನ್ನ ಪಕ್ಷ. ನಾನು ಸೋತಿದ್ದರೂ ಯಾವ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಿರುವ ಈಶ್ವರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಯಾವುದೇ ಆತುರ ತೋರಿಸದೆ ಇರಲು ಬಿಜೆಪಿ ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಆದರೆ, ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಒತ್ತಡವೂ ಪಕ್ಷದ ಕೆಲ ಮುಖಂಡರಿಂದ ವ್ಯಕ್ತವಾಗುತ್ತಿರುವುದು ಹಿರಿಯ ನಾಯಕರಿಗೆ ಇಕ್ಕಟ್ಟಿನ ಸ್ಥಿತಿ ಸೃಷ್ಟಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net