

ಬೆಂಗಳೂರು: ವಿಧಾನ ಪರಿಷತ್ ನ ಆರು ಕ್ಷೇತ್ರಗಳಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆಗೆ ಪ್ರತಿಪಕ್ಷ ಬಿಜೆಪಿ ಸನ್ನದ್ಧವಾಗಿದೆ. ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಶನಿವಾರ ಬಿಡುಗಡೆ ಮಾಡಿ, ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಮಿತ್ರಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಮೇಲ್ಮನೆ ಚುನಾವಣೆಗೆ ಪೂರ್ವ ಸಿದ್ಧತೆ ಸಭೆ ನಡೆಸಿತ್ತು. ಇದೇ ಹೊತ್ತಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು. ಇದರಿಂದಾಗಿ ಪಕ್ಷದ ಕಾರ್ಯತಂತ್ರ, ಪ್ರಚಾರ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡುವ ನಿರ್ಣಯ ತೆಗೆದುಕೊಳ್ಳಲು ಈ ಸಭೆಗೆ ಸಾಧ್ಯವಾಯಿತು.
ಪಕ್ಷದ ಅಭ್ಯರ್ಥಿಗಳಾಗಿ ಹಾಲಿ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ( ಆಗ್ನೇಯ ಶಿಕ್ಷಕರ), ಅ.ದೇವೇಗೌಡ (ಬೆಂಗಳೂರು ಪದವೀಧರ), ಮಾಜಿ ಸದಸ್ಯ ಅಮರನಾಥ ಪಾಟೀಲ (ಈಶಾನ್ಯ ಪದವೀಧರ), ಹೊಸ ಮುಖಗಳಾದ ಡಾ.ಧನಂಜಯ ಸರ್ಜಿ ( ನೈಋತ್ಯ ಪದವೀಧರ) ಮತ್ತು ಇ.ಸಿ.ನಿಂಗರಾಜ ಗೌಡ (ದಕ್ಷಿಣ ಶಿಕ್ಷಕರ) ಸ್ಪರ್ಧಿಸಲಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಸಂಘಟನೆಯನ್ನು ಸನ್ನದ್ಧಗೊಳಿಸಲು, ಕಾರ್ಯಕರ್ತರಿಗೆ ಹುರುಪು ತುಂಬಲು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೂರ್ವಸಿದ್ಧತಾ ಸಭೆಯಲ್ಲಿ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಕ್ಷೇತ್ರವಾರು ಮತದಾರರ ನೋಂದಣಿ ಪ್ರಮಾಣದ ಮಾಹಿತಿ ಪಡೆದು, ಪ್ರಚಾರ ಚಟುವಟಿಕೆಗಳ ನಿರ್ವಹಣೆ, ಚುನಾವಣಾ ಕಾರ್ಯತಂತ್ರ ಅನುಷ್ಠಾನಕ್ಕೆ ಉಸ್ತುವಾರಿ ಸಮಿತಿ ರಚನೆಗೆ ನಿರ್ಧರಿಸಿತು.
ಪ್ರತಿ ವಿಧಾನಸಭೆ ಕ್ಷೇತ್ರದ ಮೇಲ್ವಿಚಾರಣೆಗೆ ಒಬ್ಬರು, ಆಯಾ ವಿಧಾನಸಭೆ ಕ್ಷೇತ್ರಕ್ಕೆ ತಲಾ ನಾಲ್ವರು ಪ್ರಭಾರಿಗಳನ್ನು ಒಳಗೊಂಡ ಸಮಿತಿ ಹಾಗೂ ಪ್ರತಿ 25 ಮತದಾರರಿಗೆ ಒಬ್ಬ ಪ್ರಮುಖರನ್ನು ನೇಮಕ ಮಾಡಲು ಸಭೆ ನಿರ್ಧರಿಸಿತು ಎಂದು ಮೂಲಗಳು ಮಾಹಿತಿ ನೀಡಿವೆ.
ನೋಂದಣಿ ಕಾರ್ಯದ ಮೇಲುಸ್ತುವಾರಿಗೆ ಪ್ರತಿಯೊಂದು ಕ್ಷೇತ್ರಕ್ಕೆ ಇಬ್ಬರು ಸಂಚಾಲಕರನ್ನು ನೇಮಕ ಮಾಡಲಾಗಿದೆ. ಒಂದು ವರ್ಷದಿಂದ ಈ ಚಟುವಟಿಕೆ ನಡೆಯುತ್ತಿದ್ದು, ಪ್ರಚಾರಕ್ಕೆ ಕಡಿಮೆ ಕಾಲಾವಕಾಶ ಸಿಕ್ಕಿದೆ ಎಂಬ ಕೊರಗು ಬೇಡ.
ಕ್ಷೇತ್ರ ಕಾರ್ಯದಲ್ಲಿ ನಿರತರೊಂದಿಗೆ ಪ್ರಮುಖರು, ಪ್ರಭಾರಿಗಳು ಸೇರಿಕೊಂಡು ಪ್ರತಿ ಮತದಾರರ ಮನೆಗೆ ಅಭ್ಯರ್ಥಿಗಳ ಪರಿಚಯಪತ್ರ ತಲುಪಿಸುವ ಕಾರ್ಯಕ್ಕೆ ವೇಗ ನೀಡಬೇಕು ಎಂದು ಸಭೆ ಸಲಹೆ ನೀಡಿದೆ.
ಲೋಕಸಭೆ ಚುನಾವಣೆ ಅವಲೋಕನ ಸಭೆ ನಂತರ, ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತಾ ಸಭೆಗೆ ಮುನ್ನ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರು ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಬೇಕಾದ ಸಿದ್ಧತಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ತಲಾ ಮೂರು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆ ಮುಗಿದು, ಸ್ಥಳೀಯಮಟ್ಟದಲ್ಲಿ ಮತದಾರರ ಸಂಪರ್ಕ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.