

ಬೆಂಗಳೂರು: ರಸಗೊಬ್ಬರ ಅಭಾವದ ರೊಚ್ಚಿಗೆದ್ದ ರೈತರಿಗೆ ಸಾಥ್ ನೀಡಿ, ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೆಚ್ಚಿಸಲೆಂದು ಪ್ರತಿಪಕ್ಷ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಸೋಮವಾರ ಬೀದಿಗೆ ಇಳಿಯಲಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂಗಾರು ಪೂರ್ವ ಮಳೆಯಾಗಿದೆ. ಆದರೆ ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ, ಬೇಡಿಕೆ ಅಂದಾಜು ಮಾಡುವಲ್ಲಿ ಮುಗ್ಗರಿಸಿ, ಅನ್ನದಾತರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ ಎಂದು ಕೆಂಡಾಮಂಡಲವಾಗಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಭಾನುವಾರ ವೀಕ್ಷಿಸಿದ ನಂತರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ, ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆ ಒತ್ತಾಯಿಸಿ ಬೆಂಗಳೂರು ಹೊರತುಪಡಿಸಿ ರೈತ ಮೋರ್ಚಾ ನೇತೃತ್ವದಲ್ಲಿ ಸೋಮವಾರದಿಂದ ಎರಡು ಹಂತದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ರಸಗೊಬ್ಬರ ಹೆಚ್ಚುವರಿ ದಾಸ್ತಾನು (ಬರ್ ಸ್ಟಾಕ್) ಉದ್ದೇಶಕ್ಕೆ ಒಂದು ಸಾವಿರ ಕೋಟಿ ರೂ. ಅನುದಾನ ಕಾದಿರಿಸುತ್ತಿದ್ದರು. ಆದರೆ ಸಿಎಂ ಸಿದ್ದರಾಮಯ್ಯ 400 ಕೋಟಿ ರೂ. ಮೀಸಲಿರಿಸಿ 600 ಕೋಟಿ ರೂ. ಕಡಿತ ಮಾಡಿದ್ದಾರೆ ಎಂದು ಆರೋಪಿಸಿದರು.
ಕಿಸಾನ್ ಸಮ್ಮಾನ್ ನಿಧಿ ರಾಜ್ಯದ ಪಾಲು, ರೈತರ ಮಕ್ಕಳಿಗೆ ವಿದ್ಯಾನಿಧಿ, ಡೀಸೆಲ್ ಸಬ್ಸಿಡಿ ಸೇರಿ ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿ, ಅನ್ನದಾತರ ವಿರೋಧಿ ನೀತಿಯನ್ನು ಕಾಂಗ್ರೆಸ್ ಸರ್ಕಾರ ಬಹಿರಂಗಪಡಿಸಿದೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದಲ್ಲಿ ರಸಗೊಬ್ಬರ ಕಾಳದಂಧೆ ನಡೆಯುತ್ತಿದ್ದು, ಪರಿಸ್ಥಿತಿಯ ದುರ್ಲಾಭ ಪಡೆದವರು 2-3 ಪಟ್ಟು ಬೆಲೆ ತೆತ್ತು ರೈತರು ಖರೀದಿಸುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗಿಂತ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸಿದೆ. ಈ ಕುರಿತು ಪೂರ್ವಾಪರ ಮಾಹಿತಿಯಿಲ್ಲದೆ ಕೇಂದ್ರದ ಮೇಲೆ ಗೂಬೆ ಕೂರಿಸಲು ರಾಜ್ಯ ಸರ್ಕಾರ ಮಾಡಿತು ಎಂದು ದೂರಿದರು.
ರಾಜ್ಯದ ಎಲ್ಲ ಜಿಲ್ಲೆಗಳು ರೈತರು ಒಂದೇ ಬೆಳೆ, ಒಂದೇ ಸಮಯಕ್ಕೆ ಬಿತ್ತನೆ ಮಾಡುವುದಿಲ್ಲ. ಯಾವ ಜಿಲ್ಲೆಗೆ ಯಾವ ಬೆಳೆ ಬಿತ್ತನೆ ಹೆಚ್ಚು, ರಸಗೊಬ್ಬರ ಬೇಡಿಕೆಗೆ ಬರಲಿದೆ ಎಂದು ಪ್ಲ್ಯಾನ್ ಮಾಡಿ ರಸಗೊಬ್ಬರ ವಿತರಣೆ, ಪೂರೈಕೆ ಮಾಡದೇ ತನ್ನ ತಪ್ಪು ಮುಚ್ಚಿಕೊಳ್ಳಲು ಹವಣಿಸಿದೆ ಎಂದರು.
ಮುಂಗಾರು ಮಳೆ ಭರಪೂರ ಸುರಿದ ಕಾರಣ ಬಿತ್ತನೆ ಕಾರ್ಯ ಚುರುಕಾಗಿದೆ. ಇದೇ ವೇಳೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ, ಕಲಬೆರಕೆ ರಸಗೊಬ್ಬರ ಮಾರಾಟದ ದೂರುಗಳನ್ನು ಬರುತ್ತಿವೆ.
ಕೃಷಿ ಸಚಿವರು ಎಚ್ಚೆತ್ತುಕೊಂಡು ಕಳಪೆ ಬೀಜ, ಕಲಬೆರಕೆ ರಸಗೊಬ್ಬರ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಕ್ರಿಮಿನಲ್ ದಾವೆ ಹೂಡಿ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ರೈತರು ಮತ್ತೊಂದು ರೀತಿಯಲ್ಲಿ ನಷ್ಟಕಷ್ಟಕ್ಕೆ ಗುರಿಯಾಗುವುದನ್ನು ತಪ್ಪಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.