ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಆರೋಪ: ಬಿಜೆಪಿ ಪ್ರತಿಭಟನೆ

bjp
ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಎನ್.ಕೆ.ಜಗದೀಶ್, ಕೆ.ಬಿ.ಅಶೋಕನಾಯ್ಕ, ಎಂ.ಬಿ.ಹರಿಕೃಷ್ಣ, ಕೆ.ಜಿ.ಕುಮಾರಸ್ವಾಮಿ, ಮೋಹನ್ ರೆಡ್ಡಿ, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ ಇತರರಿದ್ದರು.
Published on

ಶಿವಮೊಗ್ಗ: ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಶೇ.15 ಮೀಸಲು ಕಲ್ಪಿಸಿರುವ ರಾಜ್ಯ ಸರ್ಕಾರ ಹಿಂದು ವಿರೋಧಿಯಾಗಿ ವರ್ತಿಸುತ್ತಿದೆ. ಇನ್ನೊಂದೆಡೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಮಂಜೂರು ಮಾಡಲು ಲಂಚ ಪಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಶೇ.85ರಷ್ಟು ಲೂಟಿ ಮಾಡಿದೆ. ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುತ್ತಿದೆ.ವಸತಿ ಹಂಚಿಕೆಗೂ ಹಣ ತೆಗೆದುಕೊಳ್ಳುತ್ತಿರುವ ನೀಚ ಸರ್ಕಾರವಿದು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರು ಇರುವ ವಸತಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿ ಆ ಹೆಸರಿಗೆ ಅವಮಾನ ಮಾಡುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ದೂರಿದರು

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಭಾಗ್ಯಲಕ್ಷ್ಮಿ ಬಾಂಡ್, ವಿದ್ಯಾರ್ಥಿಗಳಿಗೆ ಸೈಕಲ್ ಕೊಟ್ಟಿದ್ದೆವು. ಅದನ್ನು ಹಿಂದುಗಳಿಗೆ ಮಾತ್ರ ಕೊಡಲಿಲ್ಲ. ಎಲ್ಲ ಜಾತಿ, ಧರ್ಮದವರಿಗೆ ನೀಡಲಾಗಿತ್ತು. ಕೂಲಿ ಕಾರ್ಮಿಕರ, ರೈತರ ಹಾಗೂ ಬಡವರ ಪರವಾದ ಪಕ್ಷ ನಮ್ಮದು ಎಂಬುದನ್ನು ಬಿಜೆಪಿ ಸಾಬೀತು ಮಾಡಿದೆ ಎಂದರು.

ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆ ಕೇಳಬೇಕಾದ್ದು ಅನಿವಾರ್ಯವಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಅವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕರಾದ ಕೆ.ಬಿ.ಅಶೋಕ್‌ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ಪ್ರಮುಖರಾದ ಸುನೀತಾ ಅಣ್ಣಪ್ಪ, ಸುರೇಖಾ ಮುರಳೀಧರ್, ಶಂಕರ್ ಗನ್ನಿ, ಎಂ.ಬಿ.ಹರಿಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net