ರಾಜ್ಯ ಸರ್ಕಾರದ ನಡೆ: ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

BJP protest
Published on

ಬೆಂಗಳೂರು: ವಿಧಾನ ಪರಿಷತ್‌ನ ಘಟನೆಯ ತನಿಖೆಗೆ ಮುನ್ನವೇ ಶಾಸಕ ಸಿ.ಟಿ.ರವಿ ಬಂಧನದ ವಿರುದ್ಧ ಪ್ರತಿಪಕ್ಷ ಬಿಜೆಪಿ ಶುಕ್ರವಾರ ಸಿಡಿದೆದ್ದು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿತು. ತುರ್ತು ಪರಿಸ್ಥಿತಿಯ ಕಾಲವನ್ನು ಕಾಂಗ್ರೆಸ್ ಸರ್ಕಾರ ನೆನಪಿಸುತ್ತಿದೆ ಎಂದು ಕಿಡಿಕಾರಿತು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬೈರತಿ ಬಸವರಾಜ ಮತ್ತಿತರ ಶಾಸಕರು, ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

ದ್ವೇಷದ ರಾಜಕಾರಣಕ್ಕಾಗಿ ಪೊಲೀಸ್ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಕೇಸರಿ ಪಡೆ ಕಾರ್ಯಕರ್ತರು ಆರೋಪಿಸಿ, ಸಂವಿಧಾನ ವಿರೋಧಿ ನಡೆ ಎಂಬ ಆಕ್ರೋಶ ಹೊರ ಹಾಕಿದರು.

ದುರಹಂಕಾರದ ವರ್ತನೆ

ವಿಧಾನ ಪರಿಷತ್‌ನಲ್ಲಿ ಕಲಾಪ ಮುಂದೂಡಿದ ನಂತರ ನಡೆದ ಘಟನೆಯ ಬಗ್ಗೆ ತನಿಖೆಗೆ ಯಾವ ಅಭ್ಯಂತರವಿಲ್ಲ, ಸ್ವತಃ ಸಿ.ಟಿ.ರವಿಯವರೇ ತನಿಖೆ ನಡೆದು ಸತ್ಯ ಹೊರಬರಲಿ ಎಂದಿದ್ದಾರೆ. ಆದರೂ ದೂರು ಸಲ್ಲಿಕೆಯಾದ ತಕ್ಷಣ ಎ್ಐಆರ್ ದಾಖಲಿಸಿ, ತರಾತುರಿಯಲ್ಲಿ ಬಂಧಿಸಿದ್ದಾರೆ ಎಂದು ಪಕ್ಷದ ರಾಜ್ಯ ನಾಯಕರು ಹರಿಹಾಯ್ದರು.

ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದ ನಂತರವೂ ದೂರು ಸಲ್ಲಿಕೆ, ತರಾತುರಿಯಲ್ಲಿ ಬಂಧನ, ಸಿ.ಟಿ.ರವಿಯವರ ಜತೆಗೆ ಪೊಲೀಸರ ಅಮಾನವೀಯ ವರ್ತನೆಯು ರಾಜ್ಯ ಸರ್ಕಾರದ ದುರಹಂಕಾರ, ದುರಾಡಳಿತ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದರು.

ಸಿಎಂ, ಡಿಸಿಎಂ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಮೊಳಗಿಸಿದರು. ಇದೇ ವೇಳೆ ಮಾಜಿ ಸಚಿವರು, ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net