ರಾಹುಲ್ ಗಾಂಧಿ ಪ್ರತಿಭಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ | Vijayendra condemned

B.Y.Vijayendra
Published on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆ.5ರಂದು ನಡೆಸಲಿರುವ ಪ್ರತಿಭಟನೆ ಖಂಡಿಸಿ ಬಿಜೆಪಿಯಿಂದ ಆ.5ರಂದು ಬೆಳಗ್ಗೆ 10ಕ್ಕೆ ವಿಧಾನಸೌಧ ಆವರಣದ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನ ನಿಜಬಣ್ಣ ಬಯಲು ಮಾಡಲಿದ್ದೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ಪ್ರತಿಭಟನೆಯಿಂದ ಬಿಜೆಪಿಗೆ ಆತಂಕವಿಲ್ಲ. ಆದರೆ ರಾಹುಲ್ ಗಾಂಧಿ ನಡೆಯು ಪ್ರಜಾಪ್ರಭುತ್ವ ವಿರೋಧಿ, ಜನಾದೇಶಕ್ಕೆ ಅಪಮಾನಿಸುವ ನಡೆಯಾಗಿದೆ ಎಂದು ಟೀಕಿಸಿದರು.

ಸತತ ಸೋಲು, ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಿರುವುದು ರಾಹುಲ್ ಗಾಂಧಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹತಾಶರಾಗಿ ಹೊಸ ಕಪಟ ನಾಟಕ ಶುರು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಗಳಿಗೆ ಧ್ವನಿ ಸೇರಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು.

ಕೋರ್ಟ್ ಗೆ ಸಲ್ಲಿಸಲು ಸವಾಲು

ನಿರ್ದೇಶನವಿಲ್ಲದ ಕ್ಷಿಪಣಿ ರೀತಿಯಲ್ಲಿ ರಾಹುಲ್ ಗಾಂಧಿ ಹೇಳಿಕೆ, ಆರೋಪಗಳು ಹೊರ ಬೀಳುತ್ತಿವೆ. ಪ್ರತಿಶತ 100ರಷ್ಟು ಸಾಕ್ಷ್ಯಾಧಾರಗಳಿದ್ದರೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿ ಪ್ರಶ್ನಿಸಲಿ ಎಂದು ಸವಾಲು ಹಾಕಿದರು.

ಸಾಂವಿಧಾನಿಕ ಸಂಸ್ಥೆ ಚುನಾವಣೆ ಆಯೋಗದ ರಮೇಲೆ ನಿರಾಧಾರ ಆರೋಪ ಹೊರಿಸಿ ಜನರನ್ನು ಅಡ್ಡದಾರಿಗೆ ಎಳೆದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ನಡವಳಿಕೆಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net