ಶಿವರಾಜ್ ತಂಗಡಗಿ ವಿರುದ್ಧ ಬಿಜೆಪಿ ಪ್ರತಿಭಟನೆ

Protest
Published on

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಧಾನಿ ಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಕೂಗುತ್ತಾ, ಶಿವರಾಜ್ ತಂಗಡಗಿ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಪ್ರಧಾನಿಯವರ ಬಗ್ಗೆ ಹೀನ ಪದಗಳನ್ನು ಬಳಸಿ ಅವಮಾನ ಮಾಡುತ್ತಿದ್ದಾರೆ. ಇದು ಸಚಿವ ತಂಗಡಗಿಯವರಿಂದ ಬಂದ ಹೇಳಿಕೆಯಲ್ಲ. ಮೋದಿ ಎಂದು ಹೇಳುವವರ ಕಪಾಳಕ್ಕೆ ಹೊಡೆಯಿರಿ? ಎಂಬ ಅವರ ಹೇಳಿಕೆ ಕಾಂಗ್ರೆಸ್‌ನವರ ಮನಸ್ಥಿತಿ ಮತ್ತು ಹತಾಶೆ ತೋರಿಸುತ್ತದೆ ಎಂದು ಕಿಡಿ ಕಾರಿದರು.

ಸಚಿವ ತಂಗಡಗಿ ಹೇಳಿಕೆ ನಾಚಿಕೆಗೇಡಿತನದಿಂದ ಕೂಡಿದ್ದು, ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ದೇಶದ ಪ್ರಧಾನಿ ಕುರಿತು ಅಗೌರವದಿಂದ ಮಾತನಾಡಿರುವ ಇಂತಹವರು ಸಚಿವ ಸ್ಥಾನದಲ್ಲಿರಲು ಅನರ್ಹರು. ತಂಗಡಗಿ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿರುವ ದೂರು ದಾಖಲಾಗಬೇಕು. ಕೂಡಲೇ ಅವರು ಕ್ಷಮೆ ಕೋರಬೇಕು. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net