ಮಹಿಳೆ ವಿವಸ್ತ್ರ ಪ್ರಕರಣ ಖಂಡಿಸಿ ಬಿಜೆಪಿ ಪ್ರತಿಭಟನೆ

BJP protest
Published on

ಬೆಂಗಳೂರು: ದಲಿತ ಮಹಿಳೆ ವಿವಸ್ತ್ರ ಪ್ರಕರಣ ಖಂಡಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ಸಜ್ಜಾಗಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಪಕ್ಷದ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಬೆಂಗಳೂರಿನ ಮೇಖ್ರಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯ ಹೊಸವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದು, ಇಡೀ ಸರ್ಕಾರವೇ ಅಲ್ಲಿದ್ದಾಗ ಅಮಾನವೀಯ ಕೃತ್ಯ ಘಟಿಸಿದೆ ಎಂದು ಕಿಡಿಕಾರಿದರು.

ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರ ವಿಲವಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಪ್ರಜಾಸತ್ತಾತ್ಮಕ ಹೋರಾಟ, ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಹದಗೆಟ್ಟ ಕಾನೂನು-ಸುವ್ಯವಸ್ಥೆ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ ಎಸ್ಟಿ ಮಹಿಳೆಯನ್ನು ವಿವಸಗೊಳಿಸಿ ಮೆರವಣಿಗೆ ಮಾಡಿರುವುದನ್ನು ಯಾರೂ ಸಹಿಸುವುದಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿದರು.

ಪೊಲೀಸರು ಇಲ್ಲಿ ಪ್ರತಿಭಟನೆ ಮಾಡಬಾರದು ಎಂದು ಹೇಳುತ್ತಿದ್ದು, ಇಷ್ಟು ಕೆಟ್ಟ ಆಡಳಿತವನ್ನು ಎಂದೂ ನೋಡಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ದೂರಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಆಡಳಿತವೇ ಬೇಡ ಎಂಬಂತಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರನ್ನು ಇಳಿಸಿ ಹೊಸ ಸಿಎಂ ಮಾಡುವ ಪ್ರಯತ್ನದಲ್ಲಿದ್ದಾರೆ.

ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಕೆಲಸ ಮಾಡುತ್ತಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚೆತ್ತುಕೊಳ್ಳುವ ತನಕ ಹೋರಾಟ ಮಾಡುತ್ತೇವೆ ಎಂದು ಡಿ.ವಿ.ಸದಾನಂದ ಗೌಡ ಎಚ್ಚರಿಸಿದರು.

ಜನ-ವಾಹನಗಳ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತವಾಗುತ್ತದೆ ಎಂದು ಪೊಲೀಸರು ತಿಳಿಸಿ, ಪ್ರತಿಭಟನಾ ಹಿಂಪಡೆಯಲು ಮನವೊಲಿಸಿದರು. ಜತೆಗೆ ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಯತ್ನಕ್ಕೆ ಅವಕಾಶ ಕೊಡಲಿಲ್ಲ.

ವಶಕ್ಕೆ ಪಡೆದ ಮುಖಂಡರು, ಕಾರ್ಯಕರ್ತರನ್ನು ಮುಂಚಿತವಾಗಿ ತಂದು ನಿಲ್ಲಿಸಿದ್ದ ವಾಹನಗಳಲ್ಲಿ ಕರೆದೊಯ್ದು, ಪ್ರತಿಭಟನಾನಿರತರನ್ನು ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net