

ಬೆಂಗಳೂರು:
ದೇಶದ ಮೇಲೆ ಇಂದಿರಾಗಾಂದಿ ತುರ್ತು ಪರಿಸ್ಥಿತಿ ಹೇರಿದ್ದರಿಂದ ಸಂವಿದಾನಕ್ಕೆ ದ್ರೋಹ ಬಗೆಯಲಾಗಿದ್ದು, ಅದಕ್ಕಾಗಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಬಿಜೆಪಿ ಭಿತ್ತಪತ್ರ ಅಭಿಯಾನಕ್ಕೆ ಚಾಲನೆ ನೀಡಿದೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ್, ಶಾಸಕ ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನ ಬಳಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ತುರ್ತು ಪರಿಸ್ಥಿತಿ ವಿರೋಧಿಸಿದ ಭಿತ್ತಪತ್ರಗಳನ್ನು ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಪಕ್ಷ ದೇಶ ಮತ್ತು ಸಂವಿಧಾನದ ವಿರೋಧಿಯಾಗಿದೆ. ಅಂದು ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸಂವಿಧಾನ ಬದಲಿಸಿದ್ದಾಗಿ ಹೇಳುತ್ತಾರೆ. ನಾವೇನೂ ಬದಲಾವಣೆ ಮಾಡಿಲ್ಲ. ಆದರೆ ಬದಲಾವಣೆ ಮಾಡಿದ್ದು, ಅದನ್ನು ದುರ್ಬಳಕೆ ಮಾಡಿದ್ದು ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ದೇಶದ ಜನರ ಮುಂದೆ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ರಾಮಲೀಲಾ ಮೈದಾನಕ್ಕೆ ಬಂದು ದೇಶದ ಮುಂದೆ ತಲೆಬಾಗಿ ನಿಂತು, ದೇಶದ ಜನರ ಮುಂದೆ ತಲೆಬಗ್ಗಿಸಿ, ನಾವು ಸಂವಿಧಾನಕ್ಕೆ ಅಪಚಾರ ಮಾಡಿದ್ದಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಅವಧಿಯಲ್ಲಿ ಸಂವಿಧಾನ ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸ್ಪಷ್ಟ ಮಾಡಿದ್ದಾರೆ. ಸಂವಿಧಾನ ನಮಗೆ ಭಗವದ್ಗೀತೆ ಇದ್ದಂತೆ. ಇಂಥ ಸಂವಿಧಾನಕ್ಕೆ ಅಪಚಾರ ಬಗೆದ ಪಾಪಿಗಳು ಕಾಂಗ್ರೆಸ್ಸಿಗರು ಎಂದು ದೂರಿದರು.
ನನ್ನನ್ನು ಬಂಧಿಯಾಗಿ ಮಾಡಿದ್ದ ಬ್ಯಾರಕ್ ಇನ್ನೂ ಉಳಿದಿದೆ ಎಂದು ನೆನಪಿಸಿಕೊಂಡ ಅಶೋಕ್, ಜೈಲಿನಲ್ಲಿ 200 ಜನಕ್ಕೆ ಒಂದೇ ಬಾತ್ರೂಂ ಇತ್ತು. ಸರಿಯಾಗಿ ಊಟವೂ ಕೊಡುತ್ತಿರಲಿಲ್ಲ. ಅಲ್ಲಿಂದಲೇ ನಾವೆಲ್ಲರೂ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ವಿದ್ಯಾರ್ಥಿಯಾಗಿದ್ದಾಗ, ವಿದ್ಯಾರ್ಥಿಗಳೊಂದಿಗೆ ಜನಸಂಘ, ಆರೆಸ್ಸೆಸ್ ಪರವಾಗಿ ಇಂದಿರಾ ಗಾಂಧಿಯವರ ವಿರುದ್ಧ ಧಿಕ್ಕಾರ ಕೂಗಿದ್ದೇವೆ ಎಂದರು.
ವಶಕ್ಕೆ ಪಡೆದ ಪೊಲೀಸರು
ಸಾಂಕೇತಿಕವಾಗಿ ಗೋಡೆಗೆ ಪೋಸ್ಟರ್ ಅಂಟಿಸಿದ ಮುಖಂಡರು, ಬಳಿಕ ಅಲ್ಲಿಂದ ಕಾಂಗ್ರೆಸ್ ಕಚೇರಿಗೆ ತೆರಳಿ ಪೋಸ್ಟರ್ ಅಂಟಿಸುವುದಾಗಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹೊರಟಾಗ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು.
ಅಭಿಯಾನದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೇಶವಪ್ರಸಾದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.