ಕೊನೇ ಕ್ಷಣದ ತೀರ್ಮಾನದಿಂದ ಎಡವಟ್ಟು; ಬಿಜೆಪಿಯೊಳಗೆ ಸೋಲಿನ ಬಗ್ಗೆ ತೀವ್ರಗೊಂಡ ಚರ್ಚೆ

cvbcvbcvbdf
Published on

|ಶಿವಾನಂದ ತಗಡೂರು ಬೆಂಗಳೂರು

ವಿಧಾನ ಪರಿಷತ್ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಗೆಲ್ಲುವುದಾಗಿ ವಿಶ್ವಾಸದಿಂದ ಬೀಗಿದ್ದ ಬಿಜೆಪಿ ಕೇವಲ 11 ಸ್ಥಾನಕ್ಕೆ ಸೀಮಿತಗೊಂಡ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ನಳೀನ್​ಕುಮಾರ್ ಕಟೀಲ್ ಅಧ್ಯಕ್ಷರಾದ ಬಳಿಕ ನಡೆದಿರುವ ಚುನಾವಣೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷವನ್ನು ಮುನ್ನೆಡೆಸಲು ಪದೇ ಪದೆ ಸೋಲುತ್ತಿದ್ದಾರೆ ಎನ್ನುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಚುನಾವಣೆಯಲ್ಲಿ ನಿರೀಕ್ಷೆಯಷ್ಟು ಸ್ಥಾನ ಬಾರದೆ ಇರಲು ಪಕ್ಷದ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತ ಕೆಲ ಪ್ರಮುಖರು ಕೊನೆ ಘಳಿಗೆಯಲ್ಲಿ ತರಾತುರಿಯಲ್ಲಿ ತೆಗೆದುಕೊಂಡ ತೀರ್ವನಗಳೇ ಕಾರಣ ಎನ್ನುವ ಸಂಗತಿಯೂ ಚರ್ಚೆಗೊಳಗಾಗಿದೆ.

ಚುನಾವಣೆ ಎಂದ ಮೇಲೆ ಪಕ್ಷವನ್ನು ಸಧೃಢವಾಗಿ ಮುನ್ನಡೆಸುವುದು ಅಧ್ಯಕ್ಷರ ಮೇಲಿನ ಜವಾಬ್ದಾರಿ. ಈ ಹಂತದಲ್ಲಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೊಂದೆಡೆ ಸರ್ಕಾರಕ್ಕೂ ವರ್ಚಸ್ಸು ಬರುವಂತೆ ಪಕ್ಷವನ್ನು ಕೊಂಡೊಯ್ಯಬೇಕಾದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಇದು ಯಾಕೆ ಸಾಧ್ಯವಾಗುತ್ತಿಲ್ಲ? ಹಲವು ಬಾರಿ ಅವರಿಗೆ ಅವಕಾಶ ಸಿಕ್ಕರೂ ಅದನ್ನು ನಿಭಾಯಿಸಲು ಯಾಕೆ ವಿಫಲವಾಗುತ್ತಿದ್ದಾರೆ? ಎನ್ನುವ ಪ್ರಶ್ನೆ ಎದ್ದಿದೆ.

ಕೊನೆ ಕ್ಷಣದ ಎಡವಟ್ಟು: ಯಾವ್ಯಾವ ಕ್ಷೇತ್ರದಲ್ಲಿ ಪಕ್ಷಕ್ಕೆ ಎಷ್ಟು ಸಾಮರ್ಥ್ಯವಿದೆ ಎನ್ನುವುದು ಪಕ್ಷದ ಪ್ರಮುಖರಿಗೆ ತಿಳಿದ ವಿಷಯವೇ ಆಗಿತ್ತು. ಅದರ ಜತೆಗೆ ಅಭ್ಯರ್ಥಿಯಾಗ ಬಯಸುವವರ ಸಾಮರ್ಥ್ಯವನ್ನು ಪರಿಗಣಿಸಿ, ಆ ಕ್ಷೇತ್ರಗಳಲ್ಲಿ ವಲಸಿಗರಿಗೆ ಪ್ರವೇಶ ನೀಡಬಹುದೇ ಬೇಡವೇ ಎನ್ನುವುದನ್ನು ಮೊದಲೇ ಸ್ಪಷ್ಟವಾಗಿ ತೀರ್ವನಿಸಿದ್ದರೆ ಇಷ್ಟೊಂದು ಲೋಪವಾಗುತ್ತಿರಲಿಲ್ಲ. ಕೊನೆ ಗಳಿಗೆಯಲ್ಲಿ ವಲಸಿಗರಿಗೆ ಬಾಗಿಲು ಬಂದ್ ಮಾಡಿದ್ದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಇಲ್ಲದಿದ್ದರೆ ಕನಿಷ್ಠ ಇನ್ನು ಮೂರು ಅಥವಾ ನಾಲ್ಕು ಸ್ಥಾನಗಳನ್ನು ಗೆಲ್ಲುವ ಅವಕಾಶವಿತ್ತು ಎನ್ನುವ ಅಭಿಪ್ರಾಯವಿದೆ.

ಒಬ್ಬರಿಗೊಂದು, ಇನ್ನೊಬ್ಬರಿಗೊಂದು ನ್ಯಾಯ...: ಕೊಡಗಿನಲ್ಲಿ ಮಾಜಿ ಸಚಿವ ಎ.ಮಂಜು ಪುತ್ರ ಡಾ.ಮಂಥರಗೌಡ ಅಭ್ಯರ್ಥಿಯಾದ ಬೆನ್ನಲ್ಲಿಯೇ ಬಿಜೆಪಿ ಪಕ್ಷ ನೀಡಿದ್ದ ಎಲ್ಲ ಜವಾಬ್ದಾರಿಯಿಂದಲೂ ಅವರನ್ನು ಮುಕ್ತಗೊಳಿಸುವ ಶಿಸ್ತು ಕ್ರಮ ಕೈಗೊಂಡಿತು. ಆದರೆ, ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಲು ಕಾರಣದರಾಗಿ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದರೂ, ರಮೇಶ್ ಜಾರಕಿಹೊಳಿಗೆ ಕನಿಷ್ಠ ನೋಟಿಸ್ ನೀಡುವ ಸೌಜನ್ಯವನ್ನು ಪಕ್ಷ ಮಾಡಲಿಲ್ಲ. ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಸಂಸದ ಬಚ್ಚೇಗೌಡರ ಮಗ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾಗಲೂ ಪಕ್ಷ ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎನ್ನುವ ಆಕ್ರೋಶವೂ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ಪಕ್ಷದ ವರಿಷ್ಠರು ಈಗ ಏನೂ ಮಾತನಾಡಬೇಡ ಎಂದು ಹೇಳಿದ್ದಕ್ಕೆ ಸುಮ್ಮನಿದ್ದೇನೆ. ನಮ್ಮ ಪಕ್ಷದಲ್ಲಿ ಏನಾಗಿದೆ, ಎನಿಲ್ಲ ಎಂಬ ಬಗ್ಗೆ ವರಿಷ್ಠರೊಂದಿಗೆ ಮಾತನಾಡಿದ್ದೇನೆ. ಪಕ್ಷದ ಅಭ್ಯರ್ಥಿ ಯಾಕೆ ಸೋತರು ಎಂಬುದನ್ನು ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಪಕ್ಷೇತರನಾಗಿ ಗೆದ್ದಿರುವ ಲಖನ್ ಜಾರಕಿಹೊಳಿ ಬಿಜೆಪಿ ಸೇರುವ ತೀರ್ಮಾನ ತೆಗೆದುಕೊಳ್ಳುತ್ತಾರೆ.

| ರಮೇಶ್ ಜಾರಕಿಹೊಳಿ ಮಾಜಿ ಸಚಿವ

ಜಿಲ್ಲೆಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಹೋಟೆಲ್​ನಲ್ಲಿ ಗುಪ್ತವಾಗಿ ಮೀಟಿಂಗ್ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಮತಗಳು ಕಾಂಗ್ರೆಸ್​ಗೆ ಹೋಗಿವೆ. ಸಹೋದರರಾದ ರಮೇಶ ಹಾಗೂ ಬಾಲಚಂದ್ರ ನನ್ನ ಪರವಾಗಿ ಪ್ರಚಾರ ಮಾಡಿದ್ದರೆ ನಾನು ಮೊದಲ ಪ್ರಾಶಸ್ಱದಲ್ಲೇ ಗೆಲ್ಲುತ್ತಿದ್ದೆ. ಬೆಳಗಾವಿ ಜಿಲ್ಲೆಯಲ್ಲಿ ರಮೇಶ ಜಾರಕಿಹೊಳಿ ಒಂದು ಪ್ರಬಲ ಶಕ್ತಿ. ಅವರನ್ನು ಬಿಜೆಪಿ ಬಳಸಿಕೊಂಡು ಅಧಿಕಾರಕ್ಕೆ ಬರಲಿ.

| ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಪಕ್ಷೇತರ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net