

ಬೆಂಗಳೂರು: ಕೊಪ್ಪಳದ ಹಿಂದು ಕಾರ್ಯಕರ್ತ ಗವಿಸಿದ್ದಪ್ಪ ನಾಯಕ ಹತ್ಯೆ ಪ್ರಕರಣವನ್ನು ಎನ್‌ಎಐ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹತ್ಯೆ ಖಂಡಿಸಿ ಆ.11ರೊಳಗೆ ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಜನಾಂದೋಲನ ನಡೆಸುವೆವು ಎಂದೂ ಎಚ್ಚರಿಸಿದರು.
ಓಲೈಕೆ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಇನ್ನೆಷ್ಟು ಹಿಂದು ಕಾರ್ಯಕರ್ತರ ಹತ್ಯೆಗೆ ಕಾಂಗ್ರೆಸ್ ಸರ್ಕಾರ ಕಾದಿದೆ ? ಎಂದು ಕೇಳಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದರೂ ಸಿದ್ದರಾಮಯ್ಯ ನೇತೃತ್ವದ ದಪ್ಪಚರ್ಮದ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಟೀಕಿಸಿದರು.
ಕೊಪ್ಪಳದ ಜನಸಂದಣಿ ಹೆಚ್ಚಿರುವ ಪ್ರದೇಶದ ಮಸೀದಿ ಮುಂದಿನ ರಸ್ತೆಯಲ್ಲಿ ಗವಿಸಿದ್ದಪ್ಪ ನಾಯಕನನ್ನು ಸಾದಿಕ್ ಮತ್ತು ಆತನ ಸಹಚರರು ಸೇರಿಕೊಂಡು ಈ ಕೃತ್ಯ ಎಸಗಿದ್ದು, ಅಪ್ರಾಪ್ತ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದೇ ಕಾರಣವಾಗಿತ್ತು.
ಇಬ್ಬರೂ ಮನೆ ಬಿಟ್ಟು ಹೋಗಿದ್ದರು, ಅಪ್ರಾಪ್ತಳೆಂದು ಗೊತ್ತಾದ ಪೊಲೀಸ್ ಅಧಿಕಾರಿಗಳು ಇಬ್ಬರಿಗೂ ತಿಳಿ ಹೇಳಿ ಅವರವರ ಮನೆಗೆ ಕಳುಹಿಸಿ, ಪ್ರಕರಣ ಇತ್ಯರ್ಥಪಡಿಸಿದ್ದರು.
ನಂತರ ಸಾದಿಕ್ ಮತ್ತವನ ಸಹಚರರು ಸೇರಿಕೊಂಡು ಆ.3ರ ರಾತ್ರಿ ಮಸೀದಿ ಮುಂದೆಯೇ ಈ ತಲವಾರುಗಳಿಂದ ಹತ್ಯೆ ಮಾಡಿದ್ದಾರೆ. ಆರೋಪಿಗಳ ರಕ್ಷಣೆಗೆ ಸ್ಥಳೀಯ ಶಾಸಕ ನಿಂತಿದ್ದಾರೆ ಎಂಬ ಆರೋಪಗಳಿವೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿದರು.
ಪ್ರಮುಖ ಆರೋಪಿ ಸಾದಿಕ್ ನಿಷೇಧಿತ ಸಂಘಟನೆಯ ಸದಸ್ಯ ಎಂದು ಹೇಳಲಾಗಿದೆ. ತಲವಾರು ಹಿಡಿದು ೆಟೊಗೆ ಪೋಸ್, ಹೆದ್ದಾರಿಯಲ್ಲಿ ವ್ಹೀಲಿಂಗ್, ಗಾಂಜಾ ಸೇವನೆಯ ೆಟೊಗಳನ್ನು ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ರಾಜಾರೋಷವಾಗಿ ಹಂಚಿಕೊಂಡಿದ್ದಾರೆ.
ಹತ್ಯೆಯ ಬಳಿಕ ಸಂತ್ರಸ್ತರ ಮನೆಗೆ ಮಾಜಿ ಸಚಿವ ಶ್ರೀರಾಮುಲು ಭೇಟಿ ನೀಡಿ ಸಾಂತ್ವನ ಹೇಳಿದ್ದನ್ನು ಕೆಲವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಕೆಳಮಟ್ಟದ ಭಾಷೆ ಬಳಸಿ ಸಂದೇಶ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾಯಿಡುತ್ತೇವೆ ಎನ್ನುತ್ತಿರುವ ಪೊಲೀಸರು ಎಲ್ಲಿದ್ದಾರೆ ? ಬರೀ ಹಿಂದು, ಬಿಜೆಪಿ ಕಾರ್ಯಕರ್ತರ ಮೇಲೆ ನಿಗಾಕ್ಕೆ ಇವರು ಸೀಮಿತವಾಗಿದ್ದಾರೆ ಎಂದು ಕಿಡಿಕಾರಿದರು.
ಹವಾಮಾನ ವೈಪರೀತ್ಯದ ನೆಪವೊಡ್ಡಿ ಸಿಎಂ ಸಿದ್ದರಾಮಯ್ಯ ಅವರು ಕೊಪ್ಪಳ, ರಾಯಚೂರು ಜಿಲ್ಲೆಗಳ ಬುಧವಾರದ ಪ್ರವಾಸವನ್ನು ರದ್ದುಪಡಿಸಿದ್ದಾರೆ.
ಅಸಲಿಗೆ ಹವಾಮಾನ ವೈಪರೀತ್ಯವೇ ಕಾರಣವಲ್ಲ. ಗವಿಸಿದ್ದಪ್ಪ ನಾಯಕ ಹತ್ಯೆಯಿಂದ ಉಭಯ ಜಿಲ್ಲೆಗಳ ಹಿಂದು ಕಾರ್ಯಕರ್ತರು ರೊಚ್ಚಿಗೆದ್ದಿದ್ದು, ಕಾವೇರಿದ ವಾತಾವರಣವಿದೆ. ಈ ವೇಳೆ ಜಿಲ್ಲೆಗೆ ಭೇಟಿ ನೀಡಿದರೆ ಉತ್ತರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಪ್ರವಾಸ ರದ್ದು ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅನುಮಾನ ವ್ಯಕ್ತಪಡಿಸಿದರು.