ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚಿಕೆಗೆ ಬಿಜೆಪಿ ವಿರೋಧ

BJP complaint
Published on

ಬೆಂಗಳೂರು: ಕಾಂಗ್ರೆಸ್ ಪಕ್ಷವು ರಾಹುಲ್‌ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹಿಯುಳ್ಳ ಗ್ಯಾರಂಟಿ ಕಾರ್ಡ್‌ಗಳ ಹಂಚಿಕೆಯನ್ನು ಬಿಜೆಪಿ ಆಕ್ಷೇಪಿಸಿ, ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪಕ್ಷದ ನಿಯೋಗವು ಗುರುವಾರ ದೂರು ಸಲ್ಲಿಸಿದೆ.

ಗ್ಯಾರಂಟಿ ಕಾರ್ಡ್‌ಗಳ ಹಂಚುವುದು ಮತದಾರರಿಗೆ ಆಮಿಷವೊಡ್ಡಿದಂತಾಗಲಿದೆ. ಈ ಕಾರ್ಡ್‌ಗಳ ಹಂಚಿಕೆ ನಿಲ್ಲಿಸಬೇಕು. ಕಾನೂನು ಉಲ್ಲಂಸಿ ಮತದಾರರ ವೈಯಕ್ತಿಕ ಮಾಹಿತಿ ಕಲೆಹಾಕದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬಿಜೆಪಿ ಕೋರಿದೆ.

ಅಲ್ಲದೆ, ಒಕ್ಕಲಿಗ ಮತದಾರರ ವಿರುದ್ಧ ಸುಳ್ಳು, ಅಸಮರ್ಪಕ ಹೇಳಿಕೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ದೂರು ಸಲ್ಲಿಸಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಇನ್ನೊಂದು ದೂರು ದಾಖಲಿಸಿದೆ.

ಸಚಿವರಾದ ಲಕ್ಷ್ಮೀಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆಯವರು ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಕೆಪಿಸಿಸಿ ಐಟಿ, ಬಿಟಿ ವಿಭಾಗದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಸಚಿವರಿಬ್ಬರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.

ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕರೆಡ್ಡಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net