

ಜೈಪುರ: ಕೀಳು ರಾಜಕೀಯ ಮಾಡುತ್ತಿರುವ ಬಿಜೆಪಿ, ರಾಜಸ್ಥಾನ ಸರ್ಕಾರವನ್ನು ಕೆಳಗಿಳಿಸಲು ಕಾಂಗ್ರೆಸ್ ಶಾಸಕರನ್ನು ಖರೀದಿಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಪಕ್ಷ ನಿಷ್ಠೆ ಬದಲಿಸಲು ಕಾಂಗ್ರೆಸ್ ಶಾಸಕರಿಗೆ 15 ಕೋಟಿ ರೂ. ನಗದು ಹಾಗೂ ವಿವಿಧ ಆಮಿಷವೊಡ್ಡುತ್ತಿದೆ ಎಂದು ಗೆಹ್ಲೋಟ್ ನೇರವಾಗಿ ಆರೋಪ ಮಾಡಿದ್ದಾರೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲ ಪ್ರಯ್ನಗಳನ್ನು ಮಾಡುತ್ತಿದ್ದರೆ, ಬಿಜೆಪಿ ತೊಂದರೆಗಳನ್ನು ಉಮಟು ಮಾಡುವಲ್ಲಿ ತೊಡಗಿದೆ ಎಂದು ಗೆಹ್ಲೋಟ್ ಟೀಕಿಸಿದ್ದಾರೆ.
ಕಾಂಗ್ರೆಸ್ ಎಲ್ಲರನ್ನೂ ತನ್ನೊಂದಿಗೆ ಕೊಂಡೊಯ್ಯಲು ನೋಡುತ್ತಿದ್ದರೆ, ಬಿಜೆಪಿ ತನ್ನೆಲ್ಲ ಮಿತಿಗಳನ್ನು ದಾಟುತ್ತಿದೆ. ಶಾಸಕರನ್ನು ಬಲೆಗೆ ಬೀಳಿಸಿಕೊಳ್ಳುವ ಮೂಲಕ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಬಿಜೆಪಿ ಕೆಳಗಿಳಿಸಿದೆ. ಗುಜರಾತ್ನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಲು ಕಾಂಗ್ರೆಸ್ ಶಾಸಕರನ್ನು ಖರೀದಿಸಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ವಿವಿಧ ಆಮಿಷಗಳನ್ನು ಒಡ್ಡಿ ಅವರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಅವರ ಯತ್ನ ಯಶಸ್ವಿಯಾಗಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಶಾಸಕರು ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಕುದುರೆ ವ್ಯಾಪಾರ ಕೈಗೂಡಿಲ್ಲ. ಕಾಂಗ್ರೆಸ್ ಶಾಸಕರು, ಪಕ್ಷೇತರರು ಹಾಗೂ ಉಳಿದ ಪಕ್ಷಗಳ ಶಾಸಕರು ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಐದು ವರ್ಷಗಳ ಅವಧಿ ಪೂರ್ಣಗೊಳಿಸುತ್ತೇವೆ ಎಂದು ಶಾಸಕರು ಹೇಳಿದ್ದಾರೆ.
ಶಾಸಕರಾದ ಲಖನ್ ಸಿಂಗ್ ಮೀನಾ, ಜೋಗಿಂದರ್ ಸಿಂಗ್, ಮುಖೇಶ್ ಭಾಖರ್, ವೇದಪ್ರಕಾಶ್ ಸೋಲಂಕಿ, ಹರೀಶ್ ಮೀನಾ, ಅಶೋಕ್ ಭೈರ್ವಾ, ಶಕುಂತಲಾ ರಾವತ್ ಮೊದಲಾದವರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.
ರಾಜಸ್ಥಾನದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದೆ. ಇದರೊಂದಿಗೆ 12 ಪಕ್ಷೇತರರ ಬೆಂಬಲವನ್ನು ಪಡೆದಿದೆ. ಇದಲ್ಲದೇ, ಬಬೇರೆ ಪಕ್ಷಗಳ ಐವರು ಸರ್ಕಾರದ ಬೆಂಬಲಿಸಿದ್ದಾರೆ.