ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ದಾಖಲೆ; ರಾಜ್ಯದ ಪ್ರಚಲಿತ ವಿದ್ಯಮಾನಗಳ ಚರ್ಚೆ

BJP HC
Published on

ನವದೆಹಲಿ: ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ವಿಚಾರ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಡ್ಡಾರನ್ನು ಶುಕ್ರವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿಕೊಂಡು ಸೇರಿಸಿಕೊಂಡು ಹೋಗುತ್ತಿರುವುದಕ್ಕೆ ನಡ್ಡಾ ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ದಾಖಲೆ ಬರೆಯಲಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆಂದು ಭರವಸೆ ನೀಡಿದ್ದೇನೆ ಎಂದರು.

ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್ ಅವರನ್ನು ಗುರುವಾರ ಭೇಟಿ ಮಾಡಿ ರಾಜ್ಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ರ್ಚಚಿಸಿದ್ದೇನೆ. ಎಲ್ಲ ವಿಚಾರಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಸಮ್ಮುಖದಲ್ಲಿ ಮಾತುಕತೆ ನಡೆದಿದೆ. ಅಭ್ಯರ್ಥಿಗಳ ಕುರಿತು ವರಿಷ್ಠರ ತೀರ್ಮಾನ ಅಂತಿಮ ಎಂದ ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡುವ ವೇಳೆ ಅನಿರೀಕ್ಷಿತವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಸಿಕ್ಕಿದ್ದರು. ಮಾತುಕತೆ ನಡೆಸಿದೆ. ಅದಕ್ಕೆ ವಿಶೇಷ ಅರ್ಥ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮಂಡ್ಯ ಸಂಸದೆ ಹಾಗೂ ಪ್ರಧಾನಿ ಭೇಟಿ ಬಗ್ಗೆ ಉತ್ತರಿಸಿ, ಮಂಡ್ಯ ಕ್ಷೇತ್ರದ ಕುರಿತು ಚರ್ಚೆಯಾಗಿಲ್ಲ. ಶನಿವಾರ ರಾತ್ರಿ ಗೃಹ ಸಚಿವ ಅಮಿತ್ ಷಾ ಅವರು ಮೈಸೂರಿಗೆ ಬರಲಿದ್ದಾರೆ. ಭಾನುವಾರ ಕೋರ್ ಕಮಿಟಿ ಸಭೆ ನಿಶ್ಚಯವಾಗಿದೆ. ಅಲ್ಲಿ ಎಲ್ಲವೂ ಚರ್ಚೆಯಾಗಲಿದೆ ಎಂದರು.

ರಿಸ್ಕ್ ತೆಗೆದುಕೊಂಡು ಬಿಜೆಪಿಗೆ ಬಂದಿರುವುದಾಗಿ ಡಾ. ಕೆ. ಸುಧಾಕರ್ ಹೇಳಿರುವ ಕುರಿತು ಮಾತನಾಡಿ, ಸುಧಾಕರ್ ಕ್ಷೇತ್ರದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಅಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಬೆಂಬಲಿಸುವುದು ಹುಡುಗಾಟಿಕೆ ಮಾತಲ್ಲ. ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅಂದು ಗೆದ್ದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಲೋಕಸಭೆ ಟಿಕೆಟ್ ಅಪೇಕ್ಷೆ ತಪ್ಪಲ್ಲ. ಆದರೆ, ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಸುಧಾಕರ್ ಅವರಿಗೆ ಕೊಡಬೇಕು ಅಥವಾ ಕೊಡಬಾರದು ಎಂಬ ಬಗ್ಗೆ ನಾನು ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ರಾಜಕೀಯ ಬಿಡುತ್ತಾರೆ ಎನ್ನುತ್ತಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ಮಾಡಿಲ್ಲ. ಭರವಸೆಗಳನ್ನೂ ಈಡೇರಿಸಿಲ್ಲ. ಸರ್ಕಾರದ ಲೋಪದೋಷ, ವೈಫಲ್ಯಗಳನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವರ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಮರ್ಯಾದೆ ತೆಗೆಯುವ ಕಾರ್ಯವನ್ನು ದೆಹಲಿಯಲ್ಲಿ ಮಾಡಿದ್ದಾರೆ ಎಂದು ಟೀಕಿಸಿದರು.

ಒಂದೇ ಕಡೆ ಬಿವೈವಿ-ಯತ್ನಾಳ್: ಮುಖ ನೋಡಲೂ ಹಿಂಜರಿಯುತ್ತಿದ್ದ ಬಿ.ವೈ.ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಸಂಸತ್ತಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಚೇರಿಯಲ್ಲಿ ಒಂದೇ ಕಡೆ ಕುಳಿತಿದ್ದ ದೃಶ್ಯ ಕುತೂಹಲ ಕೆರಳಿಸಿದ್ದು ಸುಳ್ಳಲ್ಲ. ಎರಡ್ಮೂರು ದಿನಗಳಿಂದ ದೆಹಲಿಯಲ್ಲಿರುವ ಯತ್ನಾಳ್, ವಿಜಯೇಂದ್ರ ಸಂಸತ್ತಿಗೆ ಬರುವ ವೇಳೆ ಜೋಶಿ ಕಚೇರಿಯಲ್ಲಿದ್ದರು. ಈ ಸಂದರ್ಭದಲ್ಲಿ ಅವರೆಲ್ಲರ ಸಮ್ಮುಖದಲ್ಲೇ ಜೋಶಿ, ವಿಜಯೇಂದ್ರ ಸೇರಿ ಎಲ್ಲರೊಂದಿಗೆ ಮಾತುಕತೆ ನಡೆಸಿದರು. ಆದರೆ, ವಿಜಯೇಂದ್ರ-ಯತ್ನಾಳ್ ಮಧ್ಯೆ ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net