ರಾಜ್ಯದ ಹಿತ ಕಡೆಗಣಿಸಿದ ಬಿಜೆಪಿ ಎ ಮತ್ತು ಬಿ ಟೀಮ್: ಉಗ್ರಪ್ಪ

VS Ugrappa
ಎಸ್.ವಿ.ಉಗ್ರಪ್ಪ, ಮಾಜಿ ಸಂಸದ.
Published on

ಬೆಂಗಳೂರು:
ಬಿಜೆಪಿಯ ಎ ಟೀಮ್ ಪರಸ್ಪರ ಕೆಸರು ಎರೆಚಾಟದಲ್ಲಿ ಮುಳುಗಿದ್ದರೆ, ಬಿ ಟೀಮ್ ಜೆಡಿಎಸ್‌ನವರು ನಾವೇ ಪವರ್‌ಪುಲ್ ಎಂದು ತೋರಿಸಿಕೊಳ್ಳುವ ಭರದಲ್ಲಿ ರಾಜ್ಯದ ಹಿತವನ್ನು ಕಡೆಗಣಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 216 ತಾಲೂಕು ಬರಪೀಡಿತವಾಗಿದ್ದರೂ, ಈ ಬಗ್ಗೆ ಬಿಜೆಪಿ ರಚನಾತ್ಮಕ ವಿರೋಧ ಪಕ್ಷವಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುವಲ್ಲಿ ವಿಲವಾಗಿದೆ ಎಂದರು.
ಬಿಜೆಪಿಯಲ್ಲಿ ಆರ್.ಅಶೋಕ್, ವಿಜಯೇಂದ್ರ, ಬಸನಗೌಡ ಯತ್ನಾಳ್ ಅವರುಗಳೇ ಪರಸ್ಪರ ಕೆಸರು ಎರೆಚಾಟದಲ್ಲಿ ಮುಳುಗಿದ್ದು, ರೈತರ ಹಿತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಟೀಕಿಸಿದರು.
ಇನ್ನು ಬಿಜೆಪಿ ಬಿ ಟೀಮ್ ಆಗಿರುವ ಜೆಡಿಎಸ್‌ನ ಕುಮಾರಸ್ವಾಮಿ ಅವರು ಎಲ್ಲರಿಗಿಂತ ನಾವೆ ಪುರ್‌ಪುಲ್ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುವುದರಲ್ಲಿಯೇ ಕಾಲಕಳೆಯುತ್ತಿದ್ದಾರೆ. 50-60 ಶಾಸಕರು ಬರುತ್ತಾರೆ ಎಂದು ಪುಕಾರು ಹಬ್ಬಿಸುತ್ತಾ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್‌ನ 135 ಶಾಸಕರು ಪಕ್ಷ ನಿಷ್ಠರಾಗಿದ್ದು ಯಾರೂ ಪಕ್ಷ ತೊರೆಯುವುದಿಲ್ಲ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್ ಎಂದಿಗೂ
ಭ್ರಷ್ಟಾಚಾರ ಸಮರ್ಥಿಸುವುದಿಲ್ಲ
ಕಾಂಗ್ರೆಸ್ ಎಂದೂ ಭ್ರಷ್ಟಾಚಾರ ಸಮರ್ಥಿಸುವುದಿಲ್ಲ. ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ 354 ಕೋಟಿಗೂ ಹೆಚ್ಚು ಹಣ ಸಿಕ್ಕಿರುವ ಪ್ರಕರಣ ಪ್ರಸ್ತಾಪಿಸಿ, ಭ್ರಷ್ಟಾಚಾರ ಯಾರೆ ಮಾಡಿದರೂ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2021ರ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ 566 ಕೋಟಿ ವೆಚ್ಚದಲ್ಲಿ ಬಿಡಿಎ ಮನೆಗಳ ನಿರ್ಮಾಣಕ್ಕೆ ಕ್ಲಿಯರೆನ್ಸ್ ಕೊಡುವುದಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಆರ್‌ಟಿಜಿಎಸ್ ಮೂಲಕ ಯಡಿಯೂರಪ್ಪ ಕುಟುಂಬದವರ ಖಾತೆಗಳಿಗೆ ರಾಮಲಿಂಗಂ ಎಂಬ ಕಂಪನಿ ಹೆಸರಿನಲ್ಲಿ ಹಣ ವರ್ಗಾವಣೆ ಆಗಿತ್ತು. ಈ ಬಗ್ಗೆ ದಾಖಲೆಗಳಿದ್ದರೂ, ಈ ತನಕ ಯಾಕೆ ಕೇಂದ್ರ ಸರ್ಕಾರ ಐಟಿ, ಇಡಿ ತನಿಖೆ ಮಾಡಿಸಿಲ್ಲ. ನಿಮಗೆ ಕಾಂಗ್ರೆಸ್‌ನವರು ಮಾತ್ರವೇ ಕಾಣುತ್ತಿದ್ದಾರಾ ಎಂದು ಪ್ರಶ್ನಿಸಿದರು.
ವಿದೇಶದಲ್ಲಿ ಇರುವ ಕಪ್ಪು ಹಣ ವಾಪಸ್ ತರುತ್ತೇವೆ. ಕೋಟಾ ನೋಟುಗಳನ್ನು ನಿಲ್ಲಿಸುತ್ತೇವೆ. ಪ್ರತಿ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಕೊಟ್ಟ ಆಶ್ವಾಸನೆ ಯಾಕೆ ಈಡೇರಿಸಿಲ್ಲ? ಎಂದು ಕೇಳಿದರು.
ಡಬಲ್ ಇಂಜಿನ್ ಸರ್ಕಾರ ಎನ್ನುವ ಬಿಎಜಪ ನಾಯಕರು ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲು ಯಾವ ಪ್ರಯತ್ನವನ್ನು ಮಾಡುತ್ತಲೇ ಇಲ್ಲ. ರೈತರ ಹಿತ ಕಾಯಲು ಪ್ರಧಾನ ಮಂತ್ರಿ ಮೇಲೆ ಒತ್ತಡ ಹಾಕುತ್ತಿಲ್ಲ ಎಂದರು.

ಬಿಜೆಪಿ ಮುಳುಗುತ್ತಿರುವ ಹಡಗು ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಬಿಜೆಪಿಗೆ ಯಾರು ಹೋಗುವುದಿಲ್ಲ. 50 ಜನ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎನ್ನುವುದು ಸುಳ್ಳು. ಕುಮಾರಸ್ವಾಮಿಯವರು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುತ್ತದೆ ಎಂದು ಭ್ರಮೆಯಲ್ಲಿದ್ದರು. ಹತಾಶೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಚಂದ್ರಪ್ಪ, ಮುಖಂಡರಾದ ಮಹಮದ್ ಪಾಷ, ಮುಡಗುಂಜಿ, ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net