

ದೀಸ್ಪುರ್: ವಿಶ್ವವಿಖ್ಯಾತ ತಾಜ್ಮಹಲ್ ಮತ್ತು ಕುತುಬ್ ಮಿನಾರ್ ಅನ್ನು ನೆಲಸಮ ಮಾಡಿ, ಅವುಗಳ ಬದಲಾಗಿ ಭವ್ಯವಾದ ದೇವಸ್ಥಾನಗಳನ್ನು ನಿರ್ಮಿಸಿ ಎಂದು ಪ್ರಧಾನಿ ಮೋದಿ ಅವರನ್ನು ಅಸ್ಸಾಂ ಜಿಜೆಪಿ ಶಾಸಕ ರುಪ್ಜ್ಯೋತಿ ಕುರ್ಮಿ ಒತ್ತಾಯಿಸಿದ್ದಾರೆ.
ಸ್ಮಾರಕಗಳು ನೆಲಸಮ ಮಾಡುವುದಲ್ಲದೆ, ಮೊಘಲ್ ಚಕ್ರವರ್ತಿ ಶಹಜಹಾನ್ ನಿಜವಾಗಿಯೂ ಮುಮ್ತಾಜ್ ಅನ್ನು ಪ್ರೀತಿಸುತ್ತಿದ್ದನೇ ಎಂಬುದರ ಬಗ್ಗೆ ತನಿಖೆಗೂ ಸಹ ಶಾಸಕ ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾನು ಪ್ರಧಾನಿ ಮಂತ್ರಿ ಅವರಲ್ಲಿ ಕೇಳಿಕೊಳ್ಳುವುದೇನೆಂದರೆ, ತಕ್ಷಣ ಎರಡು ಸ್ಮಾರಕಗಳನ್ನು ಕೆಡವಿ. ಆ ಜಾಗದಲ್ಲಿ ವಿಶ್ವದ ಅತ್ಯಂತ ಸುಂದರವಾದ ದೇವಸ್ಥಾನಗಳನ್ನು ನಿರ್ಮಾಣ ಮಾಡಿ. ದೇವಾಲಯಗಳ ವಾಸ್ತುಶೈಲಿಯು ಹೇಗಿರಬೇಕೆಂದರೆ, ಬೇರೆ ಯಾವುದೇ ಸ್ಮಾರಕಗಳು ಕೂಡ ಅವುಗಳಿಗೆ ಹತ್ತಿರವಾಗದಂತೆ ಇರಬೇಕು. ದೇವಸ್ಥಾನಗಳನ್ನು ನಿರ್ಮಿಸಿದ್ದೇ ಆದಲ್ಲಿ, ನನ್ನ ಒಂದು ವರ್ಷದ ಸಂಬಳವನ್ನು ದೇಣಿಗೆಯಾಗಿ ನೀಡುವೆ ಎಂದು ಕುರ್ಮಿ ಹೇಳಿದ್ದಾರೆ.
ಮಮ್ತಾಜ್ ಸಾವಿನ ಬಳಿಕ ಶಹಜಹಾನ್ ಮೂರು ಬಾರಿ ಏಕೆ ಮದುವೆಯಾದರು ಎಂಬ ಪ್ರಶ್ನೆ ಕೇಳಿರುವ ಕುರ್ಮಿ, ಶಹಜಹಾನ್ ಮುಮ್ತಾಜ್‌ಳನ್ನು ನಿಜವಾಗಿ ಪ್ರೀತಿಸಿದ್ದರೆ, ಆಕೆಯ ಮರಣದ ನಂತರ ಅವನು ಮೂರು ಬಾರಿ ಏಕೆ ಮದುವೆಯಾದನು. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದು ಎನಿಸಿಕೊಂಡಿರುವ ತಾಜ್ಮಹಲ್ ಅನ್ನು ಹಿಂದು ರಾಜಮನೆತನದ ಸಂಪತ್ತಿನಿಂದ ನಿರ್ಮಿಸಲಾಗಿದೆ ಎಂದು ಅವರು ಕುರ್ಮಿ ಪ್ರತಿಪಾದಿಸಿದ್ದಾರೆ. (ಏಜೆನ್ಸೀಸ್)