ಸಿಎಂ ಭೇಟಿ ಮಾಡಿದ ಬಿಜೆಪಿ ಶಾಸಕ; ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ, ಬೇಡಿಕೆಗಳ ಮಂಡನೆ

cmsom
Published on

ಬೆಂಗಳೂರು: ಲೋಕಸಭೆ, ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಕಾಂಗ್ರೆಸ್ ಗಾಳ ಹಾಕಿರುವ ಹೊತ್ತಿನಲ್ಲೇ, ಭಾನುವಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ವಿವಿಧ ವಿಚಾರ ಚರ್ಚೆ ನಡೆಸಿದ್ದಾರೆ.

ರಾಜಕೀಯ ಬೆಳವಣಿಗೆಗಳು, ಬಿಜೆಪಿಯ ನಾಯಕರ ಭರವಸೆಗಳು, ಕ್ಷೇತ್ರದ ಆಗುಹೋಗುಗಳ ಬಗ್ಗೆ ಸಿಎಂ ಜತೆ ಸೋಮಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಕಚೇರಿಯ ಮಾಹಿತಿ ಪ್ರಕಾರ ಎಸ್.ಟಿ.ಸೋಮಶೇಖರ್ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ತುರ್ತಾಗಿ ಆಗಬೇಕಿರುವ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಿದರು.

ಕೆಂಗೇರಿ ಹೋಬಳಿಯಲ್ಲಿ ಸಣ್ಣ ಹೆರಿಗೆ ಆಸ್ಪತ್ರೆ ಇದ್ದು ಜನಸಂಖ್ಯೆಗೆ ಅನುಗುಣವಾಗಿ ನೂತನವಾಗಿ ಹೆರಿಗೆ ಆಸ್ಪತ್ರೆ ನಿರ್ಮಿಸುವ ತುರ್ತು ಅಗತ್ಯವಿದೆ. ಸರ್ ಎಂ.ವಿಶ್ವೇಶ್ವರಯ್ಯ 2ನೇ ಬ್ಲಾಕ್ ಬಡಾವಣೆಯಲ್ಲಿ ಬಿಡಿಎ ವತಿಯಿಂದ 3432 ಚ.ಮೀ.ನಷ್ಟು ಸಿಎ ನಿವೇಶನ ಮಂಜೂರಾಗಿದೆ. ಆದರೆ ಹೆರಿಗೆ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿ ಮುಂದಾಗಿಲ್ಲ ಎಂಬುದು ಅವರ ಬೇಸರವಾಗಿತ್ತು.

ಈ ಭಾಗದಲ್ಲಿ ಹೆರಿಗೆ ಆಸ್ಪತ್ರೆ ಇಲ್ಲದಿರುವುದರಿಂದ ಹೆಣ್ಣುಮಕ್ಕಳು ನಗರದ ಕೇಂದ್ರ ಭಾಗದಲ್ಲಿರುವ ವಾಣಿವಿಲಾಸ ಆಸ್ಪತ್ರೆಗೆ ತೆರಳುವಂತಾಗಿದೆ. ವಾಣಿವಿಲಾಸ ಆಸ್ಪತ್ರೆ ದೂರವಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಒಂದು ಲಕ್ಷ ರೂ.ಗಳವರಗೆ ಬಿಲ್ ಪಾವತಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಕೆಂಗೇರಿ ಭಾಗದಲ್ಲಿ ತುರ್ತಾಗಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಬಿಬಿಎಂಪಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು.

ಕೆಂಗೇರಿ ಉಪನಗರದಲ್ಲಿರುವ ಎಲ್ ಸಿ10ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಆಗುತ್ತಿರುವುದರಿಂದ ಓವರ್ ಬ್ರಿಡ್ಜ್ ನಿರ್ಮಿಸುವಂತೆ ಮೈಲಸಂದ್ರ ಮತ್ತು ಕೆಂಗೇರಿ ಉಪನಗರದ ನಿವಾಸಿಗಳ ಒತ್ತಾಸೆಯಾಗಿದೆ. ಮೇಲ್ಸೇತುವೆ ನಿರ್ಮಾಣದ ಕುರಿತಂತೆ ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದು ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆಯೂ ಮುಖ್ಯಮಂತ್ರಿಯವರಿಗೆ ಎಸ್.ಟಿ.ಸೋಮಶೇಖರ್ ಅವರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net