

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ಕ್ಷೇತ್ರಗಳ ವಸ್ತುಸ್ಥಿತಿ ಅವಲೋಕನ, 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಗಂಭೀರ ಚಿಂತನ- ಮಂಥನ ಶನಿವಾರ ನಡೆದಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ, ಪರಿಷತ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹಾಗೂ ಎಂಎಲ್ಸಿ ಸಭೆಗಳು ಪ್ರತ್ಯೇಕವಾಗಿ ನಡೆದಿವೆ. ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಸಂವಾದ ನಡೆಸಿದರು. ಸೋತ ಅಭ್ಯರ್ಥಿಗಳಿಂದ ಕ್ಷೇತ್ರದ ವಸ್ತುಸ್ಥಿತಿ, ರಾಜಕೀಯ ಪರಿಸ್ಥಿತಿ, ಸಂಘಟನೆಯ ಸ್ಥಿತಿ, ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡ ಮಾಹಿತಿ ಜತೆಗೆ ಬೇಕು-ಬೇಡಿಕೆಗಳ ಪಟ್ಟಿಯನ್ನು ಪಡೆದರು.
ಮಿಷನ್ 150 ಗುರಿ: ಸೋತವರನ್ನು ಕರೆದು ಕೇಳುವಂತಹ ವ್ಯವಸ್ಥೆ ಇರುವುದು ಬಿಜೆಪಿಯಲ್ಲಿ ಮಾತ್ರ. ಈ ಹಿಂದೆ ಅಮಿತ್ ಷಾ ಬಂದಾಗ ಸೇರಿದ್ದೆವು, ಈಗ ಮತ್ತೊಮ್ಮೆ ರ್ಚಚಿಸುತ್ತಿದ್ದೇವೆ. ಇಂತಹ ಸಭೆಗಳು ನಿರಂತರ ಮುಂದುವರಿಯಲಿವೆ ಎಂದು ಬಿಎಸ್ವೈ ತಿಳಿಸಿದರು. ಸೋಲಿನ ಗುಂಗಿನಿಂದ ಹೊರಬಂದು ಮುಂದಿನ ಚುನಾವಣೆಯಲ್ಲಿ ಮಿಷನ್ 150 ಗುರಿ ಸಾಧಿಸುವ ನಿಟ್ಟಿನತ್ತ ಗಮನವಿರಲಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸೋಣ ಎಂಬ ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ. ಸಿಎಂ ಬೊಮ್ಮಾಯಿ ಮಾತನಾಡಿ, ಏನೇ ಕೆಲಸವಿದ್ದರೂ ನೇರವಾಗಿ ಭೇಟಿ ಮಾಡಿ. ಕೆಲಸಗಳ ಪಟ್ಟಿ ಕೊಡಿ ಮಂಜೂರು ಮಾಡುವೆ. ಈ ಬಾರಿ ಅತ್ಯಧಿಕ ಸ್ಥಾನಗಳ ಜತೆಗೆ ಪಕ್ಷ ಜಯ ಸಾಧಿಸುವುದೇ ಏಕೈಕ ಲಕ್ಷ್ಯವಾಗಿದೆ ಎಂದು ಹೇಳಿದ್ದಾರೆ. ಸಕಾರಾತ್ಮಕ ಚಿಂತನೆ, ಸೋಲಿನ ಬಗ್ಗೆ ಯೋಚಿಸದೆ ಮುಂದಿನ ಕೆಲಸಗಳಿಗೆ ಆದ್ಯತೆ, ಕ್ರಿಯಾಶೀಲತೆ, ಕ್ಷೇತ್ರದಲ್ಲಿ ನಿರಂತರ ಹೋರಾಟ, ಪಕ್ಷದ ಸಮಾವೇಶ ಯಶಸ್ವಿಯಾಗುವಂತೆ ನೋಡಿ ಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಸಭೆ ಸಲಹೆ ನೀಡಿದೆ.
ಈ ಬಾರಿ ಪರಿಷತ್ ಸದಸ್ಯರಾದವರು ವಿಭಿನ್ನ ಹಿನ್ನೆಲೆ ಹೊಂದಿದ್ದರೂ ರಾಜಕಾರಣದ ಮುಖ್ಯವಾಹಿನಿ ಜತೆಗೆ ನಂಟು ಹೊಂದಿದವರಾಗಿದ್ದು, 2023ರ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕಾರ್ಯನಿರ್ವಹಿಸಬೇಕೆಂಬ ಸಲಹೆ ನೀಡಿದರು ಎಂದು ಮೂಲಗಳು ಮಾಹಿತಿ ನೀಡಿವೆ.
ಸಮೀಕ್ಷೆ ವರದಿ ಆಧರಿಸಿ ಟಿಕೆಟ್: ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಪಕ್ಷದ ಆಂತರಿಕ ಸಮೀಕ್ಷಾ ವರದಿ ಆಧರಿಸಿದ್ದು, ಆಕಾಂಕ್ಷಿಗಳ ಭವಿಷ್ಯ ಈ ವರದಿ ಕೈಯ್ಯಲ್ಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಸೂಚ್ಯವಾಗಿ ತಿಳಿಸಿದರು. ಕ್ಷೇತ್ರದ ಒಟ್ಟಾರೆ ಪರಿಸ್ಥಿತಿ, ಕ್ಷೇತ್ರದ ಮೇಲೆ ಸಾಧಿಸಿರುವ ಹಿಡಿತ, ಪ್ರಭಾವ, ಜನರು ಮತ್ತು ಕಾರ್ಯಕರ್ತರ ನಿಕಟತೆ ಸೇರಿ ಗೆಲುವಿನ ಮಾನದಂಡದಲ್ಲಿ ಅಭ್ಯರ್ಥಿ ಫೈನಲ್ ಆಗಲಿದ್ದಾರೆ. ಯಾವುದೇ ಒಬ್ಬ ವ್ಯಕ್ತಿ ಅಥವಾ ಹಿಂದಿರುವವರ ಹಿತಾಸಕ್ತಿಗಿಂತ ಪಕ್ಷದ ಅಭ್ಯರ್ಥಿ ಗೆಲುವು ಹಾಗೂ ಮತ್ತೆ ಅಧಿಕಾರಕ್ಕೆ ಬರುವುದು ಮುಖ್ಯವಾಗಿದ್ದು, ಪ್ರತಿಯೊಬ್ಬರ ಪರಿಶ್ರಮವನ್ನು ಪಕ್ಷ ಗುರುತಿಸುತ್ತದೆ. ಕಳೆದ ಚುನಾವಣೆಯಲ್ಲಿ ಸೋತೆವೆಂದು ಯಾರೊಬ್ಬರೂ ಹತಾಶರಾಗದೆ ಪಕ್ಷವು ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಿ, ಆ ಮೂಲಕ ಈ ಶ್ರೇಯಸ್ಸಿನಲ್ಲಿ ಪಾಲುದಾರರಾಗಬೇಕು ಎಂದು ಬಿಎಸ್ವೈ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ನಿಗಮ ನೇಮಕ, ಎರಡನೇ ಪಟ್ಟಿ ಸಿದ್ಧ: ಹಿರಿಯ ಕಾರ್ಯಕರ್ತರಿಗೆ ಆದ್ಯತೆ ನೀಡಲು ಉದ್ದೇಶಿತ ನಿಗಮ-ಮಂಡಳಿ ನೇಮಕದ ಎರಡನೇ ಪಟ್ಟಿ ಸಿದ್ಧವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಪಕ್ಷದ ರಾಜ್ಯ ನಾಯಕರು ರ್ಚಚಿಸಿ ಈ ಪಟ್ಟಿ ಅಂತಿಮಗೊಳಿಸಿದ್ದು, 2 ದಿನಗಳಲ್ಲಿ ಸಿಎಂ ಅಂಕಿತದೊಂದಿಗೆ ಪ್ರಕಟವಾಗುವ ಸಾಧ್ಯತೆಗಳಿವೆ. ಮೊದಲ ಪಟ್ಟಿಯಲ್ಲಿ ಕಾರ್ಯಕರ್ತರ ಜತೆಗೆ ಎಲ್ಲ ಭಾಗಕ್ಕೂ ಪ್ರಾತಿನಿಧ್ಯ ನೀಡಿ ಸಮತೋಲನ ಕಾಯ್ದುಕೊಂಡಿದ್ದರೂ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಅಂತಿಮ ಆದೇಶದಲ್ಲಿ ವ್ಯತ್ಯಾಸ, ಕೆಲವರು ಸೂಕ್ತವಾದ ನಿಗಮ-ಮಂಡಳಿ ನೀಡಿಲ್ಲವೆಂದು ತಗಾದೆ ತೆಗೆದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ತಯಾರಿ ವಿಳಂಬವಾಗಿದ್ದು, ಮತ್ತೆ ವಿಚಾರ ವಿನಿಮಯ ನಡೆಸಿ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಲಿ ಶಾಸಕ ಕ್ಷೇತ್ರದಲ್ಲಿ ಪರ್ಯಾಯ ಅಧಿಕಾರ ಕೇಂದ್ರ ಸೃಷ್ಟಿಯಾಗದ ರೀತಿ ಎಚ್ಚರಿಕೆ ವಹಿಸಿ ನಿಗಮಗಳಲ್ಲಿ ಸ್ಥಾನ ಕಲ್ಪಿಸಲಾಗಿದೆ. ಸಂಘಟನೆ, ಶಾಸಕರ ಕೆಲಸಗಳಿಗೆ ತೊಡಕಾಗದಂತೆ ಕಾರ್ಯಕರ್ತರನ್ನು ಗುರುತಿಸಿ ನೇಮಕ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಜನರ ಏಳಿಗೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಮಾಡುತ್ತಿರುವ ಕೆಲಸ, ಸರ್ಕಾರದ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಲು ಪಕ್ಷ ಶ್ರಮಿಸುತ್ತಿರುವ ಕುರಿತು ಶ್ರೀ ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕವಾದ ನಂತರ ಮೊದಲ ಬಾರಿಗೆ ವಿಜಯನಗರದಲ್ಲಿರುವ ಶ್ರೀಮಠಕ್ಕೆ ಶನಿವಾರ ಭೇಟಿಯಿತ್ತ ಬಿಎಸ್ವೈ, ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಶ್ರೀಗಳೊಂದಿಗೆ ರಾಜ್ಯದ ರಾಜಕೀಯ ವಿದ್ಯಮಾನ ಕುರಿತು ಸುದೀರ್ಘವಾಗಿ ರ್ಚಚಿಸಿರುವೆ. ಅಲ್ಲದೆ, ಸರ್ಕಾರ ಮತ್ತು ಪಕ್ಷದ ಕೆಲಸಗಳನ್ನು ನಿವೇದಿಸಿ ಮನವರಿಕೆ ಮಾಡಿಕೊಡಲಾಗಿದೆ ಎಂದರು. ಶ್ರೀಮಠವು ಶಿಕ್ಷಣ, ದಾಸೋಹದ ವಿಷಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಈ ಕಾರ್ಯಕ್ಕೆ ಸರ್ಕಾರ, ನಮ್ಮ ಪಕ್ಷದ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿ ಹಲವು ಶಾಸಕರು ಒತ್ತಾಸೆಯಾಗಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.