ರಾಷ್ಟ್ರಧ್ವಜದೊಂದಿಗೆ ಬಿಜೆಪಿ ನಡಿಗೆ ನಾಳೆ | Kudos to indian army's prowess

BJP
Published on

ಬೆಂಗಳೂರು: ಕಾಲು ಕೆದರಿ ಜಗಳಕ್ಕೆ ನಿಂತ ನೆರೆಯ ಪಾಕಿಸ್ತಾನಕ್ಕೆ ತಕ್ಕಶಾಸ್ತಿ ಮಾಡುತ್ತಿರುವ ಭಾರತೀಯ ಸೇನೆ ಪರಾಕ್ರಮಕ್ಕೆ ಅಭಿನಂದಿಸುವ ಜತೆಗೆ ಬೆಂಬಲ, ಆತ್ಮಬಲ ತುಂಬುವ ಉದ್ದೇಶದಿಂದ ಪ್ರತಿಪಕ್ಷ ಬಿಜೆಪಿ, ‘ರಾಷ್ಟ್ರ ರಕ್ಷಣೆಗಾಗಿ ನಾವು’ ತಿರಂಗಾ ನಡಿಗೆ ಭಾನುವಾರ ಹಮ್ಮಿಕೊಂಡಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ವರ್ಚುವಲ್ ವೇದಿಕೆಯಡಿ ಶನಿವಾರ ಸಭೆ ನಡೆದು, ಪಕ್ಷಾತೀತವಾಗಿ ಕಾರ್ಯಕ್ರಮ ಸಂಘಟಿಸುವ ಚರ್ಚೆಯಾಯಿತು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್ವಾಲ್, ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಿದ್ದರು.

ಮೊದಲು ಬೆಂಗಳೂರಿನಲ್ಲಿ ಬೃಹತ್ ಮಟ್ಟದ ತಿರಂಗಾ ನಡಿಗೆ ಹಮ್ಮಿಕೊಂಡು ನಂತರದ ಹಂತದಲ್ಲಿ ಜಿಲ್ಲಾ ಕೇಂದ್ರಗಳು, ಮಂಡಲ ಮತ್ತು ಬೂತ್‌ಮಟ್ಟದಲ್ಲಿ ಆಯೋಜನೆ. ಎಲ್ಲ ಕ್ಷೇತ್ರಗಳ ಗಣ್ಯರು ಮತ್ತು ಪ್ರಮುಖರನ್ನು ಒಳಗೊಳ್ಳುವಂತೆ ಮಾಡಲು ನಿರ್ಧರಿಸಲಾಗಿತ್ತು.

ಆದರೆ ಪಾಕಿಸ್ತಾನದ ಜತೆಗೆ ಪೂರ್ಣ ಪ್ರಮಾಣದ ಕದನ ವಿರಾಮ ಶನಿವಾರ ಸಂಜೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾ, ಮಂಡಲ, ಬೂತ್‌ಮಟ್ಟದ ಕಾರ್ಯಚಟುವಟಿಕೆ ಬಗ್ಗೆ ಮತ್ತೊಮ್ಮೆ ಚರ್ಚಿಸಲು ನಿರ್ಧರಿಸಲಿದೆ.

ತಿರಂಗಾ ನಡಿಗೆ

ಬೆಂಗಳೂರಿನ ವಿದ್ಯಾರಣ್ಯಪುರದ ಎನ್‌ಟಿಐ ಆಟದ ಮೈದಾನದಿಂದ ಸಹಕಾರ ನಗರದ ಗಣೇಶ ದೇವಸ್ಥಾನದವರೆಗೆ ಬೆಳಗ್ಗೆ 7ಕ್ಕೆ ತಿರಂಗಾ ನಡಿಗೆ ಹಮ್ಮಿಕೊಳ್ಳಲಾಗಿದೆ.

ನಿವೃತ್ತ ಮಾರ್ಷಲ್ ಎಸ್.ಪಿ.ಸಿಂಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,  ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಸಹ ಉಸ್ತುವಾರಿ ಪಿ.ಸುಧಾಕರ್‌ರೆಡ್ಡಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಂಸದರು, ಶಾಸಕರು, ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಕಾರ್ಯದರ್ಶಿ ಎಚ್.ಸಿ.ತಮ್ಮೇಶ ಗೌಡ ಇನ್ನಿತರರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net