

ನವದೆಹಲಿ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡು ದಿನ ಇರುವಾಗ ಬಿಜೆಪಿ ಮತ್ತು ಸಮಾಜವಾದಿ (ಎಸ್ಪಿ) ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿವೆ. ಬಿಜೆಪಿ ‘ಲೋಕ ಕಲ್ಯಾಣ ಸಂಕಲ್ಪ ಪತ್ರ-2022’ ಮತ್ತು ಎಸ್ಪಿ ‘ಸಮಾಜವಾದಿ ವಾಚನ ಪತ್ರ’ ಎಂದು ಈ ಪ್ರಣಾಳಿಕೆಗೆ ಹೆಸರಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಬಿಡುಗಡೆ ಮಾಡಿದ ಬಿಜೆಪಿ ಪ್ರಣಾಳಿಕೆಯಲ್ಲಿ ಲವ್ ಜಿಹಾದ್ ತಪ್ಪಿತಸ್ಥರಿಗೆ 10 ವರ್ಷ ಸಜೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನು ರೂಪಿಸುವ ಭರವಸೆ ನೀಡಿದೆ. ರೈತರಿಗೆ ಮುಂದಿನ ಐದು ವರ್ಷ ಕಾಲ ನೀರಾವರಿಗೆ ಉಚಿತ ವಿದ್ಯುತ್, ಬೋರ್ವೆಲ್, ಟ್ಯೂಬ್ವೆಲ್ ಮತ್ತು ಜಲಾಶಯ ನಿರ್ವಣಕ್ಕೆ 5000 ಕೋಟಿ ರೂಪಾಯಿ ಅನುದಾನ, ಉಗ್ರಾಣ, ಶೀತಲೀಕರಣ ಘಟಕ ಸ್ಥಾಪನೆಗೆ 25000 ಕೋಟಿ ರೂಪಾಯಿ ಯೋಜನೆಗಳನ್ನು ಘೋಷಿಸಲಾಗಿದೆ. ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೊಗಳಿಗೆ ಎಂಎಸ್ಪಿ, ಕೃಷಿಕರಿಗೆ ಸೌರ ಪಂಪ್ಸೆಟ್ ಮುಂತಾದ ಭರವಸೆಗಳನ್ನು ನೀಡಿದೆ. ಕಳೆದ ಚುನಾವಣೆ ವೇಳೆ ನೀಡಿದ್ದ ಭರವಸೆಗಳ ಪೈಕಿ ಶೇಕಡ 98 ಪೂರೈಸಲಾಗಿದೆ ಎಂದು ಹೇಳಿದೆ.
ಪಂಜಾಬ್-ಗೋವಾದಲ್ಲಿ ಕೃಷಿ ಸಾಲ ಮನ್ನಾ ಭರವಸೆ: ಪಂಜಾಬ್ನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ ರೈತರ ಎಲ್ಲ ಸಾಲ ಮನ್ನಾ ಮಾಡುವ ಭರವಸೆ ನೀಡಿದೆ. ‘ಮೆಹನತ್ ದಾ ಪಕ್ಕಾ ಮುಲ್’ ಅಧೀನ ಎಂಎಸ್ಪಿ ಖಚಿತಪಡಿಸುವ ಭರವಸೆಯನ್ನೂ ಕೊಟ್ಟಿದೆ. ಪ್ರಣಾಳಿಕೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಗೋವಾದಲ್ಲಿ ಮುಂದಿನ 10 ವರ್ಷದ ಅವಧಿಯಲ್ಲಿ ರಾಜ್ಯದ ಆರ್ಥಿಕತೆಯನ್ನು 5000 ಕೋಟಿ ಡಾಲರ್ಗೆ ಏರಿಸುವ ಭರವಸೆ ನೀಡಿದೆ. ಅದೇ ರೀತಿ, ಪ್ರತಿ ಮನೆಗೆ ವರ್ಷಕ್ಕೆ ಮೂರು ಎಲ್ಪಿಜಿ ಸಿಲಿಂಡರ್ ಉಚಿತ ಪೂರೈಕೆ, ಗಣಿಗಾರಿಕೆ ಮತ್ತೆ ಆರಂಭಿಸುವ ಭರವಸೆ ನೀಡಿದೆ. ಫೆ.14ರಂದು ಈ ರಾಜ್ಯದಲ್ಲಿ ಮತದಾನ ನಡೆಯಲಿದೆ.
ಫೆ. 14ರಂದು ಯಾವುದೇ ತಪ್ಪು ನಿರ್ಣಯ ಬೇಡೆಂದ ಪ್ರಧಾನಿ: ಉತ್ತರಾಖಂಡದಲ್ಲಿ ಫೆ.14ರಂದು ನಡೆಯುವ ಮತದಾನದಲ್ಲಿ್ಲ ಯಾರೂ ತಪು್ಪ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ಈ ರಾಜ್ಯದ ಜತೆಗೆ ನನಗೆ ವಿಶೇಷ ಬಾಂಧವ್ಯವಿದೆ. ನಿಮಗೆ ಸನಿಹವಾಗಿ ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಸರ್ಕಾರ ನಿಮಗೆ ಬೇಕಲ್ಲವೇ? ಹಾಗಿದ್ದರೆ ಮತದಾನದ ವೇಳೆ ಸರಿಯಾದ ನಿರ್ಣಯ ತೆಗೆದುಕೊಳ್ಳಿ ಎಂದು ವರ್ಚುವಲ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವಪಂಜಾಬ್ ಮುನ್ನೋಟ ಮುಂದಿಟ್ಟ ಪ್ರಧಾನಿ ಮೋದಿ: ಪ್ರಧಾನಿ ಮೋದಿ ಮಂಗಳವಾರ ಪಂಜಾಬ್ನಲ್ಲಿ ಕೃಷಿ, ಕೈಗಾರಿಕಾ ಅಭಿವೃದ್ಧಿ ಉದ್ದೇಶದ ‘ನವಾನ್ ಪಂಜಾಬ್’ (ಹೊಸ ಪಂಜಾಬ್)ನ ಮುನ್ನೋಟವನ್ನು ಜನರ ಮುಂದೆ ಪ್ರಸ್ತುತ ಪಡಿಸಿದರು. ಇತರೆ ಪಕ್ಷಗಳ ಪೊಳ್ಳು ಭರವಸೆಗಳು ಈ ರಾಜ್ಯಕ್ಕೆ ಬೇಕಾಗಿಲ್ಲ. ಕರ್ತಾರಪುರ (ಸಾಹಿಬ್) ದಾರಿ ಯನ್ನು ತೆರೆದಿಡಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ನಾವು ಅದನ್ನು ಸಾಧಿಸಿದ್ದೇವೆ. ನಮ್ಮ ಸರ್ಕಾರ ಪಂಜಾಬ್ನ, ಸಿಖ್ಖರ ಸಂಪ್ರದಾಯವನ್ನು ಯಾವತ್ತಿಗೂ ಗೌರವಿಸುತ್ತದೆ ಎಂದರು. ಅವರು ಲುಧಿಯಾನಾ ಮತ್ತು ಫತೇಗಢ ಸಾಹಿಬ್ ಕ್ಷೇತ್ರಗಳ ವರ್ಚುವಲ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿಗೆ ಅಧಿಕಾರ ಎಂದ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಇಂಡಿಯಾ ಟಿವಿ-ಗ್ರೌಂಡ್ ಜೀರೋ ರಿಸರ್ಚ್ ಒಪೀನಿಯನ್ ಪೋಲ್ ಸಮೀಕ್ಷೆ ತಿಳಿಸಿದೆ. ಬಿಜೆಪಿ 241-245 ಸ್ಥಾನಗಳು, ಸಮಾಜವಾದಿ ಪಾರ್ಟಿ 144-148, ಬಿಎಸ್ಪಿ 5-9, ಕಾಂಗ್ರೆಸ್ 3-7, ಇತರರು 1-3 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿವೆ ಎಂದು ಸಮೀಕ್ಷೆ ಅಂದಾಜಿಸಿದೆ.
ಸಮಾಜವಾದಿ ವಾಚನ ಪತ್ರ: ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ‘ಸಮಾಜವಾದಿ ವಾಚನ ಪತ್ರ’ ಬಿಡುಗಡೆ ಮಾಡಿದರು. ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲು, ಕಬ್ಬು ಬೆಳೆಗಾರರಿಗೆ 15 ದಿನಗಳ ಒಳಗೆ ಬಾಕಿ ಪಾವತಿ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿ, ನಾಲ್ಕು ವರ್ಷದೊಳಗೆ ಎಲ್ಲ ರೈತರೂ ಸಾಲಮುಕ್ತರಾಗಿರುತ್ತಾರೆ. 2 ಚೀಲ ಡಿಎಪಿ ರಸಗೊಬ್ಬರ, 5 ಚೀಲ ಯೂರಿಯವನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.