50 ಲಕ್ಷ ಉದ್ಯೋಗ, ಮನೆ ಬಾಗಿಲಿಗೆ ಪಡಿತರ.. ಬಿಜೆಪಿಯ ಪ್ರಣಾಳಿಕೆಯಲ್ಲಿರುವ ಭರವಸೆಗಳಿವು...

bjp
Published on

ಚೆನ್ನೈ: ಪಂಚ ರಾಜ್ಯಗಳ ಚುನಾವಣೆಯ ಪ್ರಯುಕ್ತ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿವೆ. ತಮಿಳುನಾಡಿನ ಚುನಾವಣೆಯ ಪ್ರಯುಕ್ತ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. 50 ಲಕ್ಷ ಜನರಿಗೆ ಉದ್ಯೋಗ, ಮನೆ ಬಾಗಿಲಿಗೆ ಪಡಿತರ ವಿತರಣೆ ಸೇರಿ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ರಾಜ್ಯದ 50 ಲಕ್ಷ ಜನರಿಗೆ ಉದ್ಯೋಗ ನೀಡಲಾಗುವುದು. ಮೀನುಗಾರರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. 8 ಮತ್ತು 9 ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್​ ವಿತರಿಸಲಾಗುವುದು. 18ರಿಂದ 23 ವಯಸ್ಸಿನವರಿಗೆ ಉಚಿತವಾಗಿ ಡ್ರೈವಿಂಗ್​ ಲೈಸೆನ್ಸ್​, ಪ್ರತಿ ಮನೆಗೆ ಶುದ್ಧ ನೀರು ಸಂಪರ್ಕ ನೀಡಲಾಗುವುದು.

12 ಲಕ್ಷ ಎಕರೆ ಪಂಚಮಿ ಭೂಮಿಯನ್ನು ಪರಿಶಿಷ್ಟ ಜಾತಿಯ ಜನರಿಗೆ ಹಸ್ತಾಂತರಿಸಲಾಗುವುದು. ಹಿಂದು ದೇವಸ್ಥಾನಗಳ ಆಡಳಿತವನ್ನು ಹಿಂದು ವಿದ್ವಾಂಸರು ಮತ್ತು ಸಾಧುಗಳನ್ನೊಳಗೊಂಡ ಪ್ರತ್ಯೇಕ ಮಂಡಳಿಗೆ ನೀಡಲಾಗುವುದು. ಬಿಜಿನೆಸ್​ ಕ್ಷೇತ್ರದಲ್ಲಿ ದಕ್ಷಿಣ ಭಾರತದಲ್ಲಿ ತಮಿಳುನಾಡು ನಂಬರ್​ 1 ಮಾಡಲಾಗುವುದು. ಕೃಷಿಗೆ ಪ್ರತ್ಯೇಕ ಬಜೆಟ್​ ಮಂಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಚೆನ್ನೂ ನಗರಪಾಲಿಕೆಯನ್ನು ಉತ್ತರ, ಕೇಂದ್ರ ಮತ್ತು ದಕ್ಷಿಣ ಚೆನ್ನೈ ಪಾಲಿಕೆಗಳಾಗಿ ವಿಂಗಡಿಸುವುದಾಗಿಯೂ ತಿಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net