

ತುಮಕೂರು: ಬಿಜೆಪಿಯ ಚುನಾವಣಾ ಸಿದ್ಧತೆಗಳು ಮತ್ತಷ್ಟು ವೇಗ ಪಡೆದುಕೊಂಡಿವೆ. ಒಂದು ಕಡೆ ಸರಣಿ ಸಮಾವೇಶಗಳನ್ನು ಆಯೋಜಿಸಿದ್ದು, ಇನ್ನೊಂದೆಡೆ ಪ್ರಣಾಳಿಕೆ ಸಲಹಾ ಅಭಿಯಾನ ಹಮ್ಮಿಕೊಂಡಿರುವುದು ಪಕ್ಷ ಸಂಘಟನೆಗೆ ಸಾಕ್ಷಿಯಾಗಿದೆ.
ತುಮಕೂರಿಗೆ ಶನಿವಾರ ಕೇಂದ್ರ ಸಚಿವರಿಬ್ಬರು ಪ್ರತ್ಯೇಕವಾಗಿ ಪ್ರಣಾಳಿಕೆ ಸಲಹಾ ಅಭಿಯಾನದಲ್ಲಿ ಭಾಗವಹಿಸಿ ವಿವಿಧ ವರ್ಗಗಳ ಜತೆ ಸಂವಾದ ನಡೆಸಲಿದ್ದಾರೆ. ನಗರದ ಶ್ರೀದೇವಿ ಮೆಡಿಕಲ್ ಕಾಲೇಜಿನ ಆಡಿಟೋರಿಯಂನಲ್ಲಿ ಮಾ.11 ರಂದು ಬೆಳಗ್ಗೆ 11ಕ್ಕೆ ಕೇಂದ್ರದ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತಾ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಪದವೀಧರರು, ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಗಳ ಪ್ರಬುದ್ಧರು, ಪರಿಣಿತರೊಂದಿಗೆ ಪ್ರಣಾಳಿಕೆ ಸಲಹಾ ಅಭಿಯಾನದ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ ಎರಡನೇ ಸಭೆ: ನಗರದ ಸಮೃದ್ಧಿ ಗ್ರ್ಯಾಂಡ್ ಹೋಟೆಲ್ನಲ್ಲಿ ಸಂಜೆ 4ಕ್ಕೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಫಗ್ಗನ್‌ಸಿಂಗ್ ಕುಲಸ್ತೆ ಅವರು ಗ್ರಾಮೀಣಾಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಹಾಗೂ ಕೃಷಿ ಕ್ಷೇತ್ರದ ಪರಿಣಿತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಪ್ರಣಾಳಿಕೆ ರಚನೆಗೆ ಪೂರಕವಾಗಿ ಮಾಹಿತಿಗಳನ್ನು ಕಲೆಹಾಕಲಿದ್ದಾರೆ.
ಬಿಜೆಪಿ ತುಮಕೂರು ಸಂಘಟನಾತ್ಮಕ ಜಿಲ್ಲೆಯ ಪರಿಶಿಷ್ಟ ಪಂಗಡದ ಸಮಾವೇಶ ಮಾ.11 ರಂದು ಚಿಕ್ಕನಾಯಕನಹಳ್ಳಿಯಲ್ಲಿ, ಮಾ.12 ರಂದು ಜಿಲ್ಲಾ ಎಸ್ಸಿ ಸಮಾವೇಶವನ್ನು ಗುಳೂರಿನಲ್ಲಿ ಆಯೋಜಿಸಲಾಗಿದೆ.
ಚಿಕ್ಕನಾಯಕನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ 12ಕ್ಕೆ ನವೋದಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎಸ್ಟಿ ಸಮಾವೇಶವನ್ನು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕು ಖಾತೆಯ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಉದ್ಘಾಟಿಸುವರು.
ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕ ರಾಜುಗೌಡ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್, ಪ್ರಧಾನ ಕಾರ್ಯದರ್ಶಿ ನರಸಿಂಹನಾಯ್ಕ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೇಮಲತಾ ನಾಯ್ಕ, ಅನಿಲ್ ಕುಮಾರ್ ಉಪಸ್ಥಿತರಿರುವರು.
12 ರಂದು ಎಸ್ಸಿ ಸಮಾವೇಶ: ಮಾ.12ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಎಸ್ಸಿ ಸಮಾವೇಶವನ್ನು ಗೂಳೂರಿನ ಸರ್ಕಾರಿ ಮೈದಾನದಲ್ಲಿ ಆಯೋಜಿಸಲಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸಮಾವೇಶ ಉದ್ಘಾಟಿಸುವರು. ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಕುಡುಚಿ ರಾಜೀವ್ ಭಾಗವಹಿಸುವರು. ಈ ಎರಡು ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹಮಂತ್ರಿ ಆರಗ ಜ್ಞಾನೇಂದ್ರ, ಸಚಿವರಾದ ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ ಪಾಲ್ಗೊಳ್ಳುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಪರಿಶಿಷ್ಟ ಪಂಗಡ (ಎಸ್.ಟಿ)ದವರಿಗೆ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 7ರವರೆಗೆ ಹೆಚ್ಚಿಸಿರುವುದು ಹಾಗೂ ಎಸ್ಸಿ ಸಮುದಾಯಕ್ಕೆ ಶೇ.15 ರಿಂದ ಶೇ.17 ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಈ ಎರಡು ವರ್ಗಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಎಚ್.ಎಸ್.ರವಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ
ತುಮಕೂರು: ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದಿರುವ ಮಾಜಿ ಸಚಿವ ಸೊಗಡು ಶಿವಣ್ಣ ವರಿಷ್ಠರ ಗಮನ ಸೆಳೆಯಲು ವಿನೂತನ ರೀತಿಯಲ್ಲಿ ಜೋಳಿಗೆ ಹಿಡಿದು ತಮಟೆ ಬಡಿಯುವ ಚಳವಳಿಯನ್ನು ಮಾ.12ರಂದು ಮಧ್ಯಾಹ್ನ 3 ಗಂಟೆಗೆ ಆರಂಭಿಸಲಿದ್ದಾರೆ.
ಒಂದು ಜೋಳಿಗೆಯನ್ನು ವೋಟಿಗಾಗಿ, ಮತ್ತೊಂದಕ್ಕೆ ನೋಟು ನೀಡುವಂತೆ ಮತದಾರರ ಬಳಿ ತೆರಳುವುದಾಗಿ ಹೇಳುವ ಮೂಲಕ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿದ್ದಾರೆ.
4 ಬಾರಿ ಶಾಸಕರಾಗಿ 3 ಬಾರಿ ಸಚಿವರಾಗಿದ್ದ ಶಿವಣ್ಣ 2013ರಲ್ಲಿ ಬಿಜೆಪಿ-ಕೆಜೆಪಿ ಇಬ್ಭಾಗವಾದ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ.ಬಿ.ಜ್ಯೋತಿಗಣೇಶ್ 2ನೇ ಸ್ಥಾನ ಪಡೆದಿದ್ದರು. ಹಾಗಾಗಿ, 2018ರಲ್ಲಿ ಬಿಜೆಪಿಯಲ್ಲಿ ಕೆಜೆಪಿ ವಿಲೀನವಾದ ಬಳಿಕ ಅನಿವಾರ್ಯವಾಗಿ ಜಿ.ಬಿ.ಜ್ಯೋತಿಗಣೇಶ್‌ಗೆ ಟಿಕೆಟ್ ತ್ಯಾಗ ಮಾಡುವಂತಾಯಿತು. ಹಾಲಿ ಶಾಸಕ ಜ್ಯೋತಿಗಣೇಶ್‌ಗೆ ಪಕ್ಷವು ಮತ್ತೆ ಮಣೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ ಸೊಗಡು ಈ ಬಾರಿ ಕಟ್ಟಕಡೆಯ ಪ್ರಯತ್ನವಾಗಿ ಹೊಸ ಅವತಾರ ಎತ್ತಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎರಡು ಕಡೆ ಜೋಳಿಗೆ ಹಾಕಿಕೊಂಡು ತಮಟೆ ಬಾರಿಸುವ ಸಾಂಕೇತಿಕ ಚಳವಳಿ ಆರಂಭಿಸಿದ ಶಿವಣ್ಣ, 1994 ರಿಂದ 2013ರವರೆಗೆ ತನ್ನ ಅವಧಿಯಲ್ಲಿ ನಗರದ ಅಭಿವೃದ್ಧಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಮನೆ, ಮನೆಗೆ ತೆರಳಿ ಮತದಾರರ ಅರಿವು ಮೂಡಿಸುವ ಕಾಯಕಕ್ಕೆ ಕೈ ಹಾಕಲಾಗುವುದು ಎಂದರು.
ವಿನಾಶದ ಅಂಚಿಗೆ ತಲುಪಿರುವ ಪ್ರಜಾಪ್ರಭುತ್ವ ಉಳಿಸಲು ಜೋಳಿಗೆ ಹಿಡಿದು, ತಮಟೆ ಬಾರಿಸುವ ಚಳವಳಿ ಹಮ್ಮಿಕೊಂಡಿದ್ದೇನೆ. ಮಾ.12 ರಂದು ಮಧ್ಯಾಹ್ನ 3ಕ್ಕೆ ಎನ್.ಆರ್.ಕಾಲನಿಯಲ್ಲಿ ದುರ್ಗಮ್ಮ, ಕಾಳಮ್ಮ ದೇವಿಗೆ ಪೂಜೆ ಸಲ್ಲಿಸಿ ಅಭಿಯಾನ ಪ್ರಾರಂಭಿಸುತ್ತಿದ್ದು, ಪಾರದರ್ಶಕ ಆಡಳಿತಕ್ಕಾಗಿ ಮತ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ನರಸಿಂಹಯ್ಯ, ಶಾಂತರಾಜು, ಶಬ್ಬೀರ್ ಅಹ್ಮದ್, ಜಯಸಿಂಹ, ರಂಗಾನಾಯ್ಕ, ಧನಿಯಾಕುಮಾರ್, ಗೋವಿಂದರಾಜು, ಗೋಕುಲ್ ಮಂಜುನಾಥ್, ಕೆ.ಪಿ.ಮಮತಾ ಮತ್ತಿತರರು ಹಾಜರಿದ್ದರು.
ನಗರದೆಲ್ಲೆಡೆ ಚುನಾವಣಾ ಅಕ್ರಮಗಳು ಜೋರಾಗಿವೆ. ಸೀರೆ, ಕುಕ್ಕರ್ ಹಂಚುವುದಲ್ಲದೆ, ಗುಂಡುತುಂಡು ಪಾರ್ಟಿ ಮಾಡಿಸಿ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಆಮಿಷಗಳನ್ನು ಒಡ್ಡಿ ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ಜೋಳಿಗೆ ಹಿಡಿದು, ತಮಟೆ ಬಾರಿಸುವ ಹೋರಾಟ ಆರಂಭಿಸುತ್ತಿದ್ದೇನೆ. ಜನರು ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದು ಅವರೇ ಠೇವಣಿ ಕಟ್ಟಲು ಮುಂದೆ ಬಂದಿದ್ದಾರೆ. ಅದಕ್ಕಾಗಿ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದೇನೆ.
ಸೊಗಡು ಶಿವಣ್ಣ ಮಾಜಿ ಸಚಿವ
ದಲಿತ ಕಾಲನಿಗಳ ಅಭಿವೃದ್ಧಿಗೆ ಸೊಗಡು ಶಿವಣ್ಣ ಸಾಕಷ್ಟು ಕೊಡುಗೆ ನೀಡಿದ್ದು, ಎನ್ ಆರ್ ಕಾಲನಿಯ ದುರ್ಗಮ್ಮ, ಕಾಳಮ್ಮ ದೇವಿಗೆ ಪೂಜೆ ಸಲ್ಲಿಸಿ ಮತಜೋಳಿಗೆ ಹಿಡಿದು ಅಭಿಯಾನ ಆರಂಭಿಸಲಿದ್ದಾರೆ. ನಮ್ಮ ಕಾಲನಿಯ ಜನರೇ ಎಲ್ಲರೂ ಸೇರಿ ಠೇವಣಿ ಸಂಗ್ರಹಿಸಿ ಕೊಡುತ್ತೇವೆ. ನರಸಿಂಹಯ್ಯ ಮುಖಂಡ, ಎನ್.ಆರ್.ಕಾಲನಿ